ಜಗತ್ತಿನ ದೊಡ್ಡಣ್ಣನೆಂದೇ ಖ್ಯಾತವೆತ್ತ ಅಮೆರಿಕಕ್ಕೆ (America) ಉನ್ನತ ವಿದ್ಯಾಭ್ಯಾಸದ ಕನಸನ್ನು ಹೊತ್ತು ಕಾಲಿಟ್ಟ ಭಾರತೀಯ ವಿದ್ಯಾರ್ಥಿಗಳ ಪೈಕಿ ಹಲವಾರು ವಿದ್ಯಾರ್ಥಿಗಳು ನಿಗೂಢವಾಗಿ ಶವವಾಗುತ್ತಿದ್ದಾರೆ. 2024ರ ಆರಂಭದಿಂದ ಇಲ್ಲಿಯವರೆಗೂ ಭಾರತೀಯ ಮೂಲದ 11 ವಿದ್ಯಾರ್ಥಿಗಳು ನಿಗೂಢವಾಗಿ ಸಾವಿಗೀಡಾಗಿದ್ದಾರೆ.
ಈ ರೀತಿಯ ಘಟನೆಗಳು ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ (Indian Students) ಮೇಲೆ ದ್ವೇಷ ಕೃತ್ಯಗಳು ಹೆಚ್ಚುತ್ತಿರುವುದಕ್ಕೆ ಸಾಕ್ಷಿ ಎಂಬ ಆತಂಕ ಇದೀಗ ಸೃಷ್ಟಿಯಾಗಿದೆ. ವಿಶ್ವವಿದ್ಯಾಲಯಗಳ ಕ್ಯಾಂಪಸ್ ಸುತ್ತಮುತ್ತ ದಾಳಿ ಹಾಗೂ ಹತ್ಯೆಯಂಥ ಘಟನೆಗಳು ನಡೆಯುತ್ತಿದ್ದರೂ, ವಿವಿ ಆಡಳಿತ ಮಂಡಳಿಗಳು ಮೌನವಾಗಿವೆ. ಇತ್ತ ಭಾರತದಲ್ಲಿ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಸರಣಿ ಘಟನೆಗಳಿಂದ ಭಾರತೀಯ ವಿದ್ಯಾರ್ಥಿಗಳು ಅಸುರಕ್ಷಿತ ಭಾವ ಎದುರಿಸುತ್ತಿದ್ದು, ವಿಶ್ವವಿದ್ಯಾಲಯಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದಕ್ಕೆ ಅಸಮಾಧಾನ ಕೂಡ ವ್ಯಕ್ತವಾಗಿದೆ. ಗನ್ ಸಂಸ್ಕೃತಿ ಹೆಚ್ಚಿರುವ ರಾಜ್ಯಗಳಲ್ಲೇ ಈ ಘಟನೆಗಳು ಸಂಭವಿಸಿದ್ದು. ಇದು ಭಾರತೀಯರಿಗೆ ಮಾರಕವಾಗಿ ಪರಿಣಮಿಸಿದೆ ಎಂಬ ವಾದಗಳು ಸಹ ಕೇಳಿ ಬಂದಿವೆ. ಅಮೆರಿಕದಲ್ಲಿ 2022ರಲ್ಲಿ 12, 2023ರಲ್ಲಿ 30 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದು, 2024ರ ಆರಂಭದಲ್ಲೇ 11 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
Advertisement
Advertisement
ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಮಾಹಿತಿ-ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಸೈಯ್ಯದ್ ಮಜಾಹಿರ್ ಅಲಿ ಎಂಬುವರ ಮೇಲೆ ಫೆ.4ರಂದು ದುಷ್ಕರ್ಮಿಗಳು ದಾಳಿ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಹಲ್ಲೆಯಿಂದ ತಮಗಾದ ಸ್ಥಿತಿಯ ಬಗ್ಗೆ ಸೈಯ್ಯದ್ ವಿಡಿಯೋ ಮಾಡಿ ವಿವರಣೆ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೇ ಈ ಬೆಳವಣಿಗೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತಂತೆ ಕಳವಳವನ್ನೂ ಹೆಚ್ಚಿಸಿತ್ತು.
Advertisement
ಈ ವರ್ಷದ ಪ್ರಮುಖ ಹತ್ಯೆಗಳು
Advertisement
ಅಕುಲ್ ಧವನ್: ಮಾನಸಿಕ ಸಮಸ್ಯೆಯಿಂದ, ಖಿನ್ನತೆಗೆ ಒಳಗಾಗಿ ಬಲಿ.ನಿಖರ ಕಾರಣ ಇನ್ನೂ ತಿಳಿದಿಲ್ಲ.
ನೀಲ್ ಆಚಾರ್ಯ: ಇದಕ್ಕಿದ್ದಂತೆ ನಾಪತ್ತೆ, ಆತನ ತಾಯಿ ದೂರು ನೀಡಿದ ಬಳಿಕ ಶವ ಪತ್ತೆಯಾಗಿತ್ತು.
ವಿವೇಕ್ ಸೈನಿ: ವ್ಯಕ್ತಿಯೊಬ್ಬ ಏಕಾಏಕಿ ದಾಳಿ ನಡೆಸಿ ಹತ್ಯೆಗೈದಿದ್ದು, ಕಾರಣ ಇನ್ನೂ ತಿಳಿದಿಲ್ಲ.
ಶ್ರೇಯಸ್ ರೆಡ್ಡಿ: ನಿಗೂಢ ಹತ್ಯೆ, ದ್ವೇಷ ಕಾರಣ ಅಲ್ಲವೆಂದು ಪೊಲೀಸರ ಮಾಹಿತಿ ಇದೆ.
ಸಯ್ಯದ್ ಎಂಬ ವಿದ್ಯಾರ್ಥಿ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಹೈದರಾಬಾದ್ ಮೂಲದ ವಿದ್ಯಾರ್ಥಿ ಸಯ್ಯದ್ ಮಜಹೀರ್ ಅಲಿ ಮೇಲೆ ಶಿಕಾಗೋದಲ್ಲಿ ಮಾರಣಾಂತಿಕ ದಾಳಿ ನಡೆದಿತ್ತು.
ದ್ವೇಷಕ್ಕೇನು ಕಾರಣ?
ಭಾರತೀಯರಿಗೆ ಅಮೆರಿಕದಲ್ಲಿ ಸಿಗುತ್ತಿರುವ ಮಾನ್ಯತೆ, ಆಡಳಿತದ ಪ್ರಮುಖ ಸ್ಥಾನಗಳಿಗೆ ಭಾರತೀಯ ಮೂಲದವರ ನೇಮಕ, ಅಧ್ಯಕ್ಷೀಯ ಚುನಾವಣೆ ರೇಸ್‍ನಲ್ಲಿ ಭಾರತೀಯರ ಪ್ರಾಬಲ್ಯ, ಆರ್ಥಿಕತೆಗೆ ಭಾರತದ ವಿದ್ಯಾರ್ಥಿಗಳು, ವೃತ್ತಿಪರರ ಕೊಡುಗೆಗಳೇ ಭಾರತೀಯರ ವಿರುದ್ಧ ದ್ವೇಷಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಹೆಚ್ಚುತ್ತಿದೆ ಮತ್ಸರ: ಭಾರತೀಯ ಮೂಲದ ವಿದ್ಯಾರ್ಥಿಗಳು ಓದಿನಲ್ಲಿ ಮುಂದಿದ್ದಾರೆ, ವಿಶ್ವವಿದ್ಯಾಲಯಗಳಲ್ಲಿ ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇವರು ಅಮೆರಿಕದ ವಿದ್ಯಾರ್ಥಿಗಳನ್ನೇ ಹಿಂದಿಕ್ಕುತ್ತಿದ್ದಾರೆ. ಉತ್ತಮ ಅಂಕ ಪಡೆದು ಗಮನ ಸೆಳೆಯುತ್ತಿದ್ದಾರೆ. ಇದರಿಂದ ಸ್ಪರ್ಧೆಯಲ್ಲಿ ಹಿಂದುಳಿಯುವ ಅಲ್ಲಿನ ವಿದ್ಯಾರ್ಥಿಗಳು ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಮತ್ಸರ ಹಾಗೂ ದ್ವೇಷವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇವರು ತಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಅವರಲ್ಲಿ ಬೆಳೆಯುತ್ತಿದ್ದು. ಉದ್ಯೋಗ ಪೈಪೋಟಿಯಲ್ಲೂ ಇವರೇ ತಮಗೆ ಪ್ರತಿಸ್ಪರ್ಧಿಯಾಗುತ್ತಾರೆ, ತಮ್ಮ ಉದ್ಯೋಗ ಕಿತ್ತುಕೊಳ್ಳುತ್ತಾರೆ ಎಂಬ ಭಾವ ಅಮೆರಿಕನ್ ಯುವ ಸಮುದಾಯದಲ್ಲಿ ಕಾಡುತ್ತಿದೆ.
ಅಸುರಕ್ಷಿತ ಪ್ರದೇಶಗಳಲ್ಲಿ ವಾಸ: ಇದರಿಂದ ಸ್ಥಳೀಯ ಅಪರಾಧಿಗಳು, ದುಷ್ಕರ್ಮಿಗಳ ದಾಳಿಗೆ ಗುರಿಯಾಗುತ್ತಿದ್ದಾರೆ. ಸೂಕ್ತ ಮಾಹಿತಿಯ ಕೊರತೆಯಿಂದ ಇಂಥ ಅಸುರಕ್ಷಿತ ಜಾಗಗಳನ್ನು ವಾಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ, ಬಾಡಿಗೆ ಕಡಿಮೆ ಎಂದೂ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಕಳ್ಳರು, ಮಾದಕ ವ್ಯಸನಿಗಳ ದಾಳಿಗೆ ವಿದ್ಯಾರ್ಥಿಗಳು ಸುಲಭವಾಗಿ ತುತ್ತಾಗುತ್ತಿದ್ದಾರೆ.
ಭಾರತೀಯ ಮೂಲದ ವಿದ್ಯಾರ್ಥಿಗಳು ತಮ್ಮ ಖರ್ಚನ್ನು ನಿಭಾಯಿಸಲು, ಪಾಲಕರ ಮೇಲಿನ ಆರ್ಥಿಕ ಹೊರೆಯ ಒತ್ತಡವನ್ನು ಕಡಿಮೆ ಮಾಡಲು ಓದಿನೊಂದಿಗೆ ಅರೆಕಾಲಿಕವಾಗಿ ಕೆಲಸ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಮಾಲ್‍ಗಳಲ್ಲಿ, ರೆಸ್ಟೋರೆಂಟ್‍ಗಳಲ್ಲಿ, ದೊಡ್ಡ ಸ್ಟೋರ್‌ಗಳಲ್ಲಿ ಕೆಲಸ ಮುಗಿಸಿ ಮನೆಗೆ ಮರಳುವಾಗ ಕಳ್ಳರು, ದರೋಡೆಕೋರರು ತಡರಾತ್ರಿಯ ಸಮಯದಲ್ಲಿ ಲೂಟಿಗಾಗಿ ಹಲ್ಲೆಗೈಯ್ಯುವ ನಿದರ್ಶನಗಳು ಕಂಡುಬಂದಿವೆ.
ಒಬಾಮ ಕೂಡ ಎಚ್ಚರಿಸಿದ್ದರು: ಬರಾಕ್ ಒಬಾಮ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲಿ ಹಲವು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಅವರು ಭಾರತೀಯ ವಿದ್ಯಾರ್ಥಿಗಳು ಜಾಣರು. ಗಣಿತ ಮತ್ತು ವಿಜ್ಞಾನದ ಕಲಿಕೆಯಲ್ಲಿ ಅವರು ನಿಮಗಿಂತ ಮುಂದೆ ಇದ್ದಾರೆ. ಜ್ಞಾನ, ಪ್ರತಿಭೆ ಮತ್ತು ಕೌಶಲದ ಬಲದಿಂದ ಉತ್ತಮ ಉದ್ಯೋಗವನ್ನೂ ಪಡೆದುಕೊಳ್ಳುತ್ತಾರೆ. ನೀವೆಲ್ಲ ವಿಡಿಯೋ ಗೇಮನ್ನು ಪಕ್ಕಕ್ಕೆ ಇಡಿ. ಓದಿನತ್ತ ಗಮನ ಹರಿಸಿ. ಅದರಲ್ಲೂ ಗಣಿತ. ವಿಜ್ಞಾನಕ್ಕೆ ಆದ್ಯತೆ ನೀಡಿ ಎಂದು ಕರೆ ನೀಡಿದ್ದರು.
ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ: ಉನ್ನತ ಶಿಕ್ಷಣದ ವಿಚಾರದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಕವೇ ಮೊದಲ ಆಯ್ಕೆಯಾಗಿ ಮುಂದುವರಿದಿದೆ. ಕಳೆದ ಮೂರು ವರ್ಷಗಳಿಂದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2022-23ರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 35%ರಷ್ಟು ಹೆಚ್ಚಾಗಿ 2,68,923ಕ್ಕೆ ತಲುಪಿದೆ. 2021-22ರಲ್ಲಿ ಈ ಸಂಖ್ಯೆ 1,99,182 ಆಗಿತ್ತು. ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ 10 ಲಕ್ಷ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತೀಯ ವಿದ್ಯಾರ್ಥಿಗಳ ಪಾಲು 25%ಕ್ಕಿಂತಲೂ ಹೆಚ್ಚಿದೆ.