ಚಾಮರಾಜನಗರ: ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಗ್ರಾಮಾಂತರ ಪ್ರದೇಶಗಳಲ್ಲಿ ಪಾಳೆಗಾರಿಕೆ ಸಂಸ್ಕೃತಿ ಇನ್ನೂ ಮುಂದುವರಿದಿದೆ. ಅನಿಷ್ಠ ಪದ್ದತಿಗಳು ಅಮಾಯಕ ಕುಟುಂಬಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಚಾಮರಾಜನಗರ (Chamarajanagara) ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದವರಿಗೆ ಮನೆ ಬಾಡಿಗೆ ನೀಡಿದ ಒಂದೇ ಕಾರಣಕ್ಕೆ ಸವರ್ಣೀಯ ಕುಟುಂಬವೊಂದಕ್ಕೆ ಸವರ್ಣೀಯರೇ ಸಾಮಾಜಿಕ ಬಹಿಷ್ಕಾರ (Social Boycott) ಹಾಕಿರುವುದು ಬೆಳಕಿಗೆ ಬಂದಿದೆ.
ದೇವರ ಕಾರ್ಯಕ್ಕೆ ಚಂದಾ ಕೊಡಲಿಲ್ಲ, ಪಂಚಾಯಿತಿ ಕಟ್ಟೆಯಲ್ಲಿ ಯಜಮಾನರ ಮಾತು ಕೇಳಲಿಲ್ಲ ಅಥವಾ ಅಂತರ್ಜಾತಿಯ ವಿವಾಹವಾದರು ಎಂಬಿತ್ಯಾದಿ ಕಾರಣಗಳಿಗೆ ಹಳ್ಳಿಗಳಲ್ಲಿ ಸಾಮಾಜಿಕ ಬಹಿಷ್ಕಾರ ಹಾಕುವುದನ್ನು ಕೇಳಿದ್ದೇವೆ.. ನೋಡಿದ್ದೇವೆ. ಆದ್ರೆ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಅಗರ ಗ್ರಾಮದಲ್ಲಿ ಪರಿಶಿಷ್ಟ ವರ್ಗದವರಿಗೆ ಮನೆ ನೀಡಿದ ಕಾರಣಕ್ಕೆ ಸವರ್ಣೀಯ ಕುಟುಂಬವೊಂದಕ್ಕೆ ಸವರ್ಣೀಯರೇ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಗ್ರಾಮದ ಲಿಂಗಾಯತ ಬಡಾವಣೆಯ ವೀರಣ್ಣ 10 ತಿಂಗಳ ಹಿಂದೆ ತಮಗೆ ಸೇರಿದ ಮನೆಯನ್ನು ಪರಿಶಿಷ್ಟ ವರ್ಗದ ಕುಟುಂಬವೊಂದಕ್ಕೆ ಬಾಡಿಗೆಗೆ ನೀಡಿದ್ದರು. ಅನ್ಯ ಜಾತಿಯವರಿಗೆ ಮನೆ ಬಾಡಿಗೆ ನೀಡಿದ ಕಾರಣಕ್ಕೆ ಗ್ರಾಮದ ಲಿಂಗಾಯತ ಮುಖಂಡರು ವೀರಣ್ಣ ಅವರ ಕುಟುಂಬಕ್ಕೆ ಬಹಿಷ್ಕಾರ ಹೇರಿದ್ದಾರೆ. ತಮ್ಮ ಕುಟುಂಬವನ್ನು ಗ್ರಾಮದ ಯಾವುದೇ ಧಾರ್ಮಿಕ ಸಭೆ ಸಮಾರಂಭಗಳಿಗೆ ಕರೆಯುತ್ತಿಲ್ಲ ಹಾಗೂ ದೇವಸ್ಥಾನಕ್ಕೆ ಹೋಗಲು ತಡೆ ಒಡ್ಡಲಾಗುತ್ತಿದೆ. ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿದೆ ಇದರಿಂದ ಗ್ರಾಮದಲ್ಲಿ ಬದುಕು ನಡೆಸುವುದೇ ದುಸ್ತರವಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಮಗೆ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎನ್ನುತ್ತಿದ್ದಾರೆ.
ತಮಗೆ ಬಹಿಷ್ಕಾರ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ತಮಗೆ ಎಂದಿನಂತೆ ಗ್ರಾಮದಲ್ಲಿ ಇತರರೊಂದಿಗೆ ಸಾಮರಸ್ಯದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಬಹಿಷ್ಕಾರಕ್ಕೆ ಒಳಗಾದ ವೀರಣ್ಣ ಅವರ ಕುಟುಂಬದ ಒತ್ತಾಯವಾಗಿದೆ. ಒಟ್ಟಾರೆ ನಾಗರೀಕತೆ ಎಷ್ಟೇ ಮುಂದುವರಿದಿದ್ದರೂ ಸಾಮಾಜಿಕ ಬಹಿಷ್ಕಾರ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಗಳು ನಾಗರೀಕ ಸಮಾಜವನ್ನು ಬಾಧಿಸುತ್ತಿರುವುದು ವಿಪರ್ಯಾಸವಾಗಿದೆ.