ಬಳ್ಳಾರಿ: ಪೊಲೀಸರ ಕಿರುಕುಳಕ್ಕೆ ಬೇಸತ್ತು ಫುಟ್ ಪಾತ್ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ್ಲಿಗೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಫುಟ್ ಪಾತ್ ವ್ಯಾಪಾರ ಮಾಡುತ್ತಿದ್ದ 34 ವರ್ಷದ ರೂಪಾ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ. ಕಳೆದ ಹಲವಾರು ದಿನಗಳಿಂದ ಫುಟ್ ಪಾತ್ ಮೇಲೆ ಡಬ್ಬಾ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಮಹಿಳೆಗೆ ಪ್ರತಿ ತಿಂಗಳು ಮೂರು ಸಾವಿರ ರೂ. ಹಫ್ತಾ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟದ್ದರಂತೆ.
ಬಡ ವ್ಯಾಪಾರಿಯಾಗಿದ್ದ ಮಹಿಳೆ ಹಫ್ತಾ ನೀಡದ್ದಕ್ಕೆ ಭಾನುವಾರ ಸಂಜೆ ಅಂಗಡಿಯನ್ನು ಪೊಲೀಸರು ತೆರವು ಮಾಡಿದ್ದರು. ಅಷ್ಟೇ ಅಲ್ಲದೇ ಅಂಗಡಿ ತೆರವು ವೇಳೆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ ಅವಮಾನಿಸಿದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಖಾನಾಹೊಸಹಳ್ಳಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.