ಬೆಂಗಳೂರು: ಮನೆಯ ಮುಂದೆ ಕಸ ಎಸೆದ ವಿಚಾರವಾಗಿ ಗಲಾಟೆ ನಡೆದಿದ್ದು, ಎರಡು ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಾಗಿರುವ ಘಟನೆ ನಗರದ ತಲಘಟ್ಟಪುರದಲ್ಲಿ ನಡೆದಿದೆ.
ಕಸ ಎಸೆದ ವಿಚಾರಕ್ಕೆ ಎದುರು ಬದುರು ಮನೆಯವರಿಗೆ ಗಲಾಟೆಯಾಗಿದೆ. ಸುಮ್ಮ ಸುಮ್ಮನೆ ಕಾಲು ಕೆರೆದುಕೊಂಡು ಪುಟ್ಟೇಗೌಡ ಹಾಗೂ ಅವರ ಪತ್ನಿ ರುಕ್ಮಿಣಿ ಅವರಿಗೆ ಜನಾರ್ಧನ್ ಹಾಗು ಮಕ್ಕಳಾದ ಪ್ರದೀಪ್ ಮತ್ತು ಭೈರೇಗೌಡ ಎಂಬವರು ಹಲ್ಲೆ ನಡೆಸಿದ್ದಾರೆ.
ಪುಟ್ಟೇಗೌಡರಿಗೆ ಮೈಯೆಲ್ಲಾ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ಕೊಟ್ಟಿರೋ ಸೈಟ್ ಕಿತ್ತುಕೊಳ್ಳಲು ಗಲಾಟೆ ಮಾಡುತ್ತಿದ್ದಾರೆ ಎಂದು ರುಕ್ಮಿಣಿ ಆರೋಪಿಸಿದ್ದಾರೆ. ಪತಿಯ ಮೇಲೆ ಹಲ್ಲೆಯಾದ ಬಳಿಕ ರುಕ್ಮಿಣಿ ಅವರು ಮಕ್ಕಳಾದ ಮಮತಾ ಮತ್ತು ಚೇತನ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಘಟನೆ ನಡೆದು ಎರಡು ಗಂಟೆಗಳಾದರು ತಲಘಟ್ಟಪುರ ಪೊಲೀಸ್ ಠಾಣೆಯಲ್ಲೇ ಪುಟ್ಟೇಗೌಡರನ್ನು ಇರಿಸಿಕೊಂಡಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದೀರ ಎಂದು ಇನ್ಸ್ ಪೆಕ್ಟರ್ ರಾಮಪ್ಪರನ್ನು ಕೇಳಿದ್ದಕ್ಕೆ, ಕಾನೂನು ಮಾತಾಡುತ್ತೀಯ ಎಂದು ಮಕ್ಕಳ ಮೇಲೂ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ರುಕ್ಮೀಣಿ ಆರೋಪ ಮಾಡುತ್ತಿದ್ದಾರೆ.
ಇನ್ನು ಮಮತಾ ಲೆಕ್ಚರರ್ ಆಗಿದ್ದು, ಮಗ ಚೇತನ್ ಜಿಯೋನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗಲಾಟೆ ನಡೆದ ವೇಳೆ ನಾವು ಇಬ್ಬರೂ ಸ್ಥಳದಲ್ಲಿ ಇರಲಿಲ್ಲ. ಆದರೂ ನಮ್ಮ ಮೇಲೂ ಇನ್ಸ್ ಪೆಕ್ಟರ್ ರಾಮಪ್ಪ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಡಿಸಿಪಿ ಬಳಿ ಹೋದರೆ ನಮಗೆ ನ್ಯಾಯ ಸಿಗುತ್ತಿಲ್ಲ, ನ್ಯಾಯ ಕೊಡಿಸಿ ಎಂದು ನೊಂದ ಕುಟುಂಬ ಅಂಗಲಾಚುತ್ತಿದೆ. ಈ ಸಂಬಂಧ ಪೊಲೀಸರು ಎರಡು ಕುಟುಂಬಗಳ ಮೂವರು ಸದಸ್ಯರ ವಿರುದ್ಧ ಎಫ್ಆಯ್ಆರ್ ದಾಖಲು ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.