ಬೆಂಗಳೂರು: ಸಮಾಧಿಯಾಗಿದ್ದ ವ್ಯಕ್ತಿಯ ಕೇಸ್ ಇದೀಗ ಮತ್ತೆ ಓಪನ್ ಆಗಿದೆ. ವರ್ಷದ ನಂತರ ಪ್ರಕರಣದ ಮರು ವಿಚಾರಣೆ ಆಗುತ್ತಿದ್ದು, ತನಿಖೆ ನಡೆಸಿದ ಪೊಲೀಸರ ಮೇಲೆಯೇ ಅನುಮಾನ ಎದ್ದಿದೆ.
ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಸಲೀಂ ಎಂಬುವರ ಪತ್ನಿ ಅಪ್ಸಾನಾ ನೀಡಿದ ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂದು ತಿಳಿದು ಪೊಲೀಸ್ ಆಯುಕ್ತರಾದ ಸುನೀಲ್ ಕುಮಾರ್ ಇದೀಗ ಪ್ರಕರಣದ ತನಿಖೆ ನಡೆಸುವಂತೆ ಚಂದ್ರಾಲೇಔಟ್ ಪೊಲೀಸರಿಗೆ ಸೂಚಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಬೆಂಗಳೂರಿನ ಗಂಗೊಂಡನಹಳ್ಳಿ ನಿವಾಸಿಯಾದ ಸಲೀಂ ಎಂಬವರು 2016 ರ ಅಕ್ಟೋಬರ್ 18 ರಂದು ದೀಪಾಂಜಲಿ ನಗರದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಮೊದಲು ಚಂದ್ರಾಲೇಔಟ್‍ನ ಗುರುಶ್ರೀ ಆಸ್ಪತ್ರೆ ಸೇರಿದ್ದ ಸಲೀಂ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಆದರೆ ಮರು ದಿನವೇ ಸಲೀಂ ಅವರನ್ನ ನಿಮ್ಹಾನ್ಸ್ ನಿಂದ ಡಿಸ್ಚಾರ್ಜ್ ಮಾಡಿಸಿದ್ದ ಸೋದರರಾದ ನದೀಂ ಹಾಗೂ ಖಲೀಮ್, ಅಣ್ಣ ತೀರಿಹೋಗಿದ್ದಾನೆಂದು ಮನೆಯವರಿಗೆ ಹೇಳಿ ಮಣ್ಣು ಮಾಡಿದ್ದರು.
Advertisement
Advertisement
ಅನುಮಾನ ಮೂಡಿದ್ದು ಹೇಗೆ?
ಸಲೀಂ ಅಪಘಾತಕ್ಕೆ ಒಳಗಾಗುವ ಮುನ್ನ ಸೋದರರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಗಲಾಟೆ ಆಗಿತ್ತು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಸಲೀಂ ಮೃತಪಟ್ಟಿರಲಿಲ್ಲ. ಹಾಗೆಯೇ ಸಲೀಂ ಮೃತಪಡದೆ ಇದ್ದುದರಿಂದ ಮರಣೋತ್ತರ ಪರೀಕ್ಷೆ ಸಹ ನಡೆದಿರಲಿಲ್ಲ. ಹೀಗಾಗಿ ಅನುಮಾನದಿಂದ ಪತಿಯ ಸಾವಿನ ಬಗ್ಗೆ ಪತ್ನಿ ಅಪ್ಸಾನಾ ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಮತ್ತೆ ತನಿಖೆ ಯಾಕೆ?
ದೂರು ದಾಖಲಿಸಿಕೊಳ್ಳಲು ಕಾಲಹರಣ ಮಾಡಿದ್ದ ಪೊಲೀಸರು 2017ರ ಮಾರ್ಚ್ 27 ರಂದು ನಾನ್ ಕಾಗ್ನಿಸೆಬಲ್ ರಿಪೋರ್ಟ್(ಗಂಭೀರವಲ್ಲದ ಕೃತ್ಯ) ಬರೆದುಕೊಟ್ಟು ಕೈತೊಳೆದುಕೊಂಡಿದ್ದರು. ಚಂದ್ರಾಲೇಔಟ್ ಠಾಣೆ ಪೊಲೀಸರು ಅಪ್ಸಾನಾ ದೂರನ್ನು ಮೊದಲಿಗೆ ತಿರಸ್ಕಾರದಿಂದ ನೋಡಿ ಕೊನೆಯಲ್ಲಿ ಎನ್‍ಸಿಆರ್ ದಾಖಲಿಸಿದ್ದಾರಾದರೂ ಅದರ ಬಗ್ಗೆಯೂ ಹಲವು ಅನುಮಾನಗಳು ಎದ್ದಿವೆ. ದಿನಾಂಕ, ಹೆಸರುಗಳೆಲ್ಲವೂ ತಪ್ಪಾಗಿದ್ದು ಬೇರೆ ಯಾರದ್ದೋ ಎನ್‍ಸಿಆರ್ ತಿದ್ದಿ ಇವರಿಗೆ ಕೊಟ್ಟಿದ್ದಾರೆಂಬ ಮಾತೂ ಕೇಳಿಬಂದಿದೆ. ಹಾಗೆಯೇ ಅಪ್ಸಾನಾ ಪತಿ ಸಲೀಂಗೆ ಪಿತ್ರಾರ್ಜಿತವಾಗಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯಿದ್ದು, ಅದನ್ನ ಕಬಳಿಸಲು ಸೋದರರೇ ಕೊಲೆ ಮಾಡಿದ್ದಾರೆಂಬ ಆರೋಪವೂ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಅಪಘಾತದಲ್ಲಿ ಸಲೀಂ ಮೃತಪಟ್ಟರೂ ಸಂಬಂಧಪಟ್ಟ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ. ಅದರ ಜತೆಗೆ ನಿಮ್ಹಾನ್ಸ್ ನಲ್ಲಿ ಸಾಯುವ ಮುನ್ನವೇ ಸಲೀಂ ಅವರನ್ನ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿರುವುದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಆಸ್ತಿಗಾಗಿ ಸೋದರರೇ ಕೊಲೆ ಮಾಡಿದ್ರಾ ಎನ್ನುವ ಅನುಮಾನ ದಟ್ಟವಾಗಿದೆ.
ತನಿಖೆಯ ಉಸ್ತುವಾರಿಯನ್ನ ಕೆಂಗೇರಿ ಗೇಟ್ ಎಸಿಪಿ ಪ್ರಕಾಶ್ ಅವರಿಗೆ ವಹಿಸಲಾಗಿದ್ದು ಚಂದ್ರಾ ಲೇಔಟ್ ಪೊಲೀಸರು ಮತ್ತೆ ತನಿಖೆ ಆರಂಭಿಸಿದ್ದಾರೆ. ಸದ್ಯ ಸಲೀಂ ಸೋದರರು ಹಾಗೂ ಕೃತ್ಯಕ್ಕೆ ಸಹಕರಿಸಿದ ಜಮೀರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆಯ ನಂತರವೇ ಸಲೀಂ ಸಾವಿನ ರಹಸ್ಯ ಹೊರಬರಲಿದೆ.