Cinema
ಮಗನ ಸಿನಿಮಾ ಹುಚ್ಚುತನಕ್ಕಾಗಿ ಮೂರೂವರೆ ಎಕರೆ ಜಮೀನನ್ನೇ ಮಾರಲು ಮುಂದಾದ ಹೆತ್ತವರು!

ಕೊಪ್ಪಳ: ಕೋಟಿಗಟ್ಟಲೆ ಬಂಡವಾಳ ಹಾಕಿ ತಯಾರಾಗಿರುವ ಅದೆಷ್ಟೋ ಸಿನಿಮಾಗಳು ಫ್ಲಾಪ್ ಆಗಿರುವ ಉದಾಹರಣೆಗಳಿವೆ. ಆದರೆ ಇದು ಬಣ್ಣದ ಬದುಕಿನ ಸೆಳೆತ ಎನ್ನಬೇಕೋ ಅಥವಾ ಹುಚ್ಚುತನ ಎನ್ನಬೇಕೋ ಗೊತ್ತಿಲ್ಲ. ಮಗನ ಸಿನಿಮಾ ಹುಚ್ಚಿಗೆ ತಂದೆ-ತಾಯಿ ತಮಲ್ಲಿರು ಜಮೀನನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ.
ಹೌದು. ಬಣ್ಣದ ಜಗತ್ತೆ ಹಾಗೆ. ಸಿನಿಮಾದಲ್ಲಿ ನಟಿಸೋ ಆಸೆ ಹೊತ್ತ ಅದೆಷ್ಟೋ ಯುವಕರು ಒಂದ್ ಚಾನ್ಸ್ ಗಾಗಿ ಅಲೆದಾಡೋದನ್ನು ನೋಡಿದ್ದೀವಿ. ಆದರೆ ಕೊಪ್ಪಳದ ಶಂಶುದ್ದೀನ್ ಅಲಿಯಾಸ್ ಸಚ್ಚಿ ಎಂಬ ಯುವಕನಿಗೆ ಸಿನಿಮಾದ ಸೆಳೆತ ಅನ್ನಬೇಕೋ ಹುಚ್ಚತನ ಅನಬೇಕೋ ಗೊತ್ತಿಲ್ಲ. ಸ್ವಂತ ಬ್ಯಾನರ್ ನಡಿ ಸಿನಿಮಾ ಮಾಡೋ ಹಠ ಹಿಡಿದಿದ್ದಾರೆ.
ಕೊಪ್ಪಳದ ತಳಕಲ್ ಗ್ರಾಮದ ನಿವಾಸಿಯಾಗಿರೋ ಸಿನಿಮಾದಲ್ಲೇ ಮಿಂಚಬೇಕು, ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದ ಇವರು ಸಾಮರಸ್ಯ ಸಾರುವ ಒಂದು ಕತೆ ಇಟ್ಕೊಂಡು ಸಿನಿಮಾ ಮಾಡೋಕೆ ಪಣ ತೊಟ್ಟಿದ್ದಾರೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ಮಗನ ಸಿನಿಮಾ ವ್ಯಾಮೋಹಕ್ಕೆ ತಂದೆ-ತಾಯಿ ಮೂರುವರೆ ಎಕರೆ ಜಮೀನು ಮಾರಾಟ ಮಾಡೋಕೆ ಮುಂದಾಗಿದ್ದಾರೆ.
ಚಿಕ್ಕಂದಿನಿಂದಲೇ ಸಂಶೀರ್ ಗೆ ಸಿನಿಮಾ ಎಂದರೆ ಪಂಚಪ್ರಾಣ. ಲೂಸ್ ಮಾದ ಯೋಗಿಯ ಧೂಳಿಪಟ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಲ್ಲದೆ ಸ್ಥಳೀಯ ಸಿನಿಮಾಗಳಾದ ಜವರಾಯ, ಬೆಳ್ಳಕ್ಕಿ ಜೋಡಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಭಾವೈಕ್ಯತೆ ಸಾರುವ ಸಿನಿಮಾ ಮಾಡೋ ಆಸೆ ಹೊಂದಿರೋ ಇವರು ಸಿನಿಮಾಕ್ಕಾಗಿ ಶಿಶುನಾಳಕ್ಕೆ ಹೋಗಿ ಶರೀಫರ ಬಗ್ಗೆ ತಿಳಿದುಕೊಂಡು ಬಂದು ಕಥೆ ಸಿದ್ಧ ಮಾಡಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆದರೆ ಪ್ರೋತ್ಸಾಹದ ಕೊರತೆ ಇದೆ. ಆದರೆ ಇಲ್ಲಿ ಹೆತ್ತವರು ತಮ್ಮ ಮಗನ ಕನಸು ನನಸು ಮಾಡಲು ಜಮೀನು ಮಾರಾಟ ಮಾಡುತ್ತಿರುವುದು ಮೆಚ್ಚಲೇಬೇಕು.
