ಕಿಸ್: ಮುದ್ದು ಮನಸುಗಳ ಮಧುರ ಪ್ರೇಮಕಾವ್ಯ!

Public TV
2 Min Read
442950

ಬೆಂಗಳೂರು: ಯಾರನ್ನೇ ಆದರೂ ಕಾಡುವಂಥಾ ಮಧುರ ಪ್ರೇಮ ಕಾವ್ಯಗಳಿಗೆ ಹೆಸರಾಗಿರುವವರು ನಿರ್ದೇಶಕ ಎ.ಪಿ ಅರ್ಜುನ್. ಬಹು ಕಾಲದಿಂದಲೂ ಚೆಂದದ ಹಾಡುಗಳ ಮೂಲಕವೇ ಭಾರೀ ಸದ್ದು ಮಾಡುತ್ತಾ ಸಾಗಿ ಬಂದಿರೋ ಅರ್ಜುನ್ ನಿರ್ದೇಶನದ ಕಿಸ್ ಚಿತ್ರವೀಗ ತೆರೆ ಕಂಡಿದೆ. ಈವರೆಗೂ ಕೂಡಾ ಕೇವಲ ಯುವ ಬಳಗವನ್ನು ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಕೂಡಾ ಈ ಚಿತ್ರ ಸಾರಾಸಗಟಾಗಿಯೇ ಸೆಳೆದುಕೊಂಡಿತ್ತು. ಹೀಗೆ ಬಿಡುಗಡೆ ಪೂರ್ವದಲ್ಲಿ ಎಂಥಾ ಕ್ರೇಜ್ ಸೃಷ್ಟಿಯಾಗಿತ್ತೋ ಅದಕ್ಕೆ ತಕ್ಕುದಾದ ಮಧುರ ಪ್ರೇಮಕಾವ್ಯವೇ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

Kiss 2

ಸದಾ ಪುಟಿದೇಳುವಂಥಾ ಉತ್ಸಾಹವನ್ನು ಎದೆಯಲ್ಲಿಟ್ಟುಕೊಂಡ ಹುಡುಗ, ನಿಂತಲ್ಲಿ ಕುಂತಲ್ಲಿ ಕನಸು ಕಾಣೋ ಮುದ್ದಾದ ಹುಡುಗಿ. ಆ ಇಬ್ಬರ ಭೇಟಿಯೂ ಆಕಸ್ಮಿಕ. ಆದರೆ ಅದುವೇ ಮುದ್ದಾದ ಪ್ರೇಮ ಯಾನಕ್ಕೆ ಆರಂಭವಾಗುತ್ತೆ. ಹೀಗೆ ಎರಡು ಮುದ್ದಾದ ಮನಸುಗಳು ಮುಖಾಮುಖಿಯಾದ ನಂತರದ ಯಾವ ಎಳೆಯನ್ನು ಹೇಳಿದರೂ ಅದರ ನಿಜವಾದ ಫೀಲ್ ಅನ್ನು ಹಿಡಿದಿಡೋದು ಕಷ್ಟ. ಈ ಯುವ ಜೋಡಿಗಳ ಕೀಟಲೆ, ತರಲೆಗಳ ಎನರ್ಜಿಟಿಕ್ ಪ್ರೇಮ ಯಾನವನ್ನು ಥಿಯೇಟರಿಗೇ ತೆರಳಿ ನೋಡಿದರೆನೇ ಚೆಂದ.

Kiss 6

ಪ್ರೀತಿ ಅನ್ನೋದು ಯಾವತ್ತಿಗೂ ಹಳತಾಗದ ಮಾಯೆ. ಅದಕ್ಕೆ ಹೇಗೆಲ್ಲ ಹೊಸತನದ ಹೊಳಪು ನೀಡ ಬೇಕೆಂಬ ಕಲೆ ನಿರ್ದೇಶಕ ಎ.ಪಿ ಅರ್ಜುನ್‍ಗೆ ಸರಿಯಾಗಿಯೇ ಅರಿವಿದೆ. ಈ ಹಿಂದಿನ ಚಿತ್ರಗಳಲ್ಲಿಯೂ ಕೂಡಾ ಅಂಥಾ ಕಲೆಗಾರಿಕೆಯ ಕಾರಣದಿಂದಲೇ ಅವರು ಗೆಲ್ಲುತ್ತಾ ಬಂದಿದ್ದಾರೆ. ತಾಜಾ ತಾಜ ಅನ್ನಿಸೋ ಕಥೆಗೆ ಅಷ್ಟೇ ಫ್ರೆಶ್ ಮುಖಗಳನ್ನು ನಾಯಕ ನಾಯಕಿಯನ್ನಾಗಿಸಿರೋ ಅರ್ಜುನ್ ಈ ಎಲ್ಲ ಪಾತ್ರಗಳನ್ನೂ ಕೂಡಾ ಕಿಸ್ ಮೂಲಕ ಪ್ರೇಕ್ಷಕರ ಮನದಂಗಳಕ್ಕೆ ದಾಟಿಸುವಲ್ಲಿ ಗೆದ್ದಿದ್ದಾರೆ. ವಿರಾಟ್ ಶ್ರೀಲೀಲಾ ಆರಂಭದಿಂದ ಕಡೇಯವರೆಗೂ ಕೂಡಾ ಒಂದೇ ಥರದ ಎನರ್ಜಿಯೊಂದಿಗೆ ನಟಿಸಿದ್ದಾರೆ. ಈ ಮೂಲಕ ಇಬ್ಬರೂ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ.

KISS

ಇದಲ್ಲದೇ ಬೇರೆ ಪಾತ್ರಗಳೂ ಕೂಡಾ ಕಥೆಯ ಓಘಕ್ಕೆ ತಮ್ಮ ಕೊಡುಗೆಯನ್ನೂ ನೀಡುವಂತೆ ಮೂಡಿ ಬಂದಿವೆ. ಬಿಡುಗಡೆ ಪೂರ್ವದಲ್ಲಿಯೇ ಹಿಟ್ ಆಗಿದ್ದ ಹಾಡುಗಳೆಲ್ಲವೂ ಕಥೆಗೆ ತಕ್ಕುದಾಗಿ ಮತ್ತೆ ಪ್ರೇಕ್ಷಕರನ್ನು ಮೋಹಕವಾಗಿಯೇ ಕಾಡಿದೆ. ದೃಷ್ಯಗಳಿಗೆ ಹೊಸ ಮೆರುಗು ಕೊಟ್ಟು ರಿಚ್ ಆಗಿ ಕಟ್ಟಿಕೊಡೋದರೊಂದಿಗೆ ಅರ್ಜುನ್ ನಿರ್ಮಾಪಕರಾಗಿಯೂ ಗಮನ ಸೆಳೆದಿದ್ದಾರೆ. ಒಟ್ಟಾರೆಯಾಗಿ ಕಿಸ್ ಎಲ್ಲ ವಯೋಮಾನ ಮತ್ತು ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಚಿತ್ರ.

ರೇಟಿಂಗ್: 4/5

Share This Article
Leave a Comment

Leave a Reply

Your email address will not be published. Required fields are marked *