ಕಾರವಾರ: ಬ್ಯಾಂಕ್ ನಲ್ಲಿ ಚಿನ್ನವನ್ನು ಅಡವಿಟ್ಟುಕೊಳ್ಳುವ ಮೌಲ್ಯಮಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬ ನಕಲಿ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ರೂ. ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಲ್ಲಾಪುರದ ರಾಜಕುಮಾರ್ ಶೇಟ್ ಎಂಬವನೇ ಬ್ಯಾಂಕ್ ಗೆ ಮೋಸ ಮಾಡಿ ಪರಾರಿಯಾದ ಆಭರಣ ಮೌಲ್ಯಮಾಪಕ. ರಾಜಕುಮಾರ್ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕಳೆದ 11 ವರ್ಷದಿಂದ ಕೆಲಸ ಮಾಡುತ್ತಿದ್ದ. ಅಲ್ಲದೇ ಮಲ್ಲಾಪುರದಲ್ಲಿ ಆರ್.ಕೆ ಜ್ಯುವೆಲರ್ಸ್ ಎಂಬ ಚಿನ್ನಾಭರಣ ಅಂಗಡಿಯನ್ನು ನಡೆಸುತ್ತಿದ್ದ.
Advertisement
Advertisement
ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ರಾಜಕುಮಾರ್ ಬ್ಯಾಂಕ್ ನಲ್ಲಿ ಹೆಚ್ಚು ನಂಬಿಕೆ ಗಳಿಸಿದ್ದ. ಇದನ್ನೇ ದುರುಪಯೋಗ ಮಾಡಿಕೊಂಡ ಆತ ತನ್ನ ಪರಿಚಯಸ್ಥರಿಗೆ ನಕಲಿ ಬಂಗಾರದ ಆಭರಣ ಮಾಡಿಸಿಕೊಟ್ಟು ಈ ಆಭರಣವನ್ನು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‍ನಲ್ಲಿ ಚಿನ್ನಾಭರಣ ಸಾಲ ತೆಗೆಸಿ ಆ ಹಣದಲ್ಲಿ ಕಮಿಷನ್ ಪಡೆದು ಬ್ಯಾಂಕ್ ನಿಂದ ಬರೋಬ್ಬರಿ 35 ಲಕ್ಷ ರೂ. ಪೀಕಿದ್ದಾನೆ. ಅಲ್ಲದೇ ತನ್ನ ಆಭರಣದ ಅಂಗಡಿಯ ಗ್ರಾಹಕರಿಗೂ ನಕಲಿ ಬಂಗಾರದ ಆಭರಣ ಮಾಡಿಕೊಟ್ಟು ಲಕ್ಷಗಟ್ಟಲೇ ಹಣವನ್ನು ದೋಚಿ ಪರಾರಿಯಾಗಿದ್ದಾನೆ.
Advertisement
Advertisement
ಘಟನೆ ಬೆಳಕಿಗೆ ಬಂದದ್ದು ಹೇಗೆ: 2016 ರಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನಾಭರಣವನ್ನು ಬ್ಯಾಂಕ್ ನಿಂದ ಗ್ರಾಹಕರು ಬಿಡಿಸಿಕೊಂಡು ಹೋಗದ ಹಿನ್ನಲೆಯಲ್ಲಿ ಹರಾಜಿಗೆ ಹಾಕುವ ವೇಳೆ ಮತ್ತೊಬ್ಬ ಬಂಗಾರ ಪರೀಕ್ಷಕ ನಕಲಿ ಚಿನ್ನವನ್ನು ಪತ್ತೆ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು ತಮ್ಮ ಬ್ಯಾಂಕ್ ನಲ್ಲಿ ಅಡವಿಟ್ಟಿದ್ದ ಇತರೆ ಖಾತೆಗಳನ್ನು ಪರೀಕ್ಷಿಸಿದ್ದಾರೆ. ಇದರಲ್ಲಿ 14 ಖಾತೆದಾರು ಅಡವಿಟ್ಟಿದ್ದ ಸುಮಾರು 53 ಲಕ್ಷ ಮೊತ್ತದ ಚಿನ್ನಾಭರಣ ನಕಲಿ ಎಂಬ ಅಂಶ ಬೆಳಕಿಗೆ ಬಂದಿದೆ.
ಸದ್ಯ ಘಟನೆಯ ಕುರಿತು ಮಲ್ಲಾಪುರ ಠಾಣೆಯಲ್ಲಿ ಬ್ಯಾಂಕ್ ಹಾಗೂ ಗ್ರಾಹಕರು ದೂರು ನೀಡಿದ್ದಾರೆ. ಆದರೆ ಆರೋಪಿ ಎರಡು ವಾರದಿಂದ ಕುಟುಂಬ ಸಮೇತ ಪರಾರಿಯಾಗಿದ್ದು ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ.