ಶಿವಮೊಗ್ಗ: ನಗರದ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಕೊಂಡಿರುವ ಘಟನೆ ನಡೆದಿದೆ.
ರಾಘು ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದು, ಈತ ಸೀನಿಯರ್ ವಿದ್ಯಾರ್ಥಿಗಳ ರ‍್ಯಾಗಿಂಗ್ ನಿಂದಾಗಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
ಹಾಸ್ಟೆಲ್ ನ ತನ್ನ ರೂಮಿನಲ್ಲೇ ನೇಣು ಬಿಗಿದುಕೊಂಡಿರುವ ರಾಘು ಮೃತದೇಹವನ್ನು ಸೀನಿಯರ್ ವಿದ್ಯಾರ್ಥಿಗಳೇ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದರು. ಪೊಲೀಸರು ಬರುವ ಮುನ್ನವೇ ನೇಣು ಹಾಕಿಕೊಂಡಿದ್ದ ದೇಹವನ್ನು ಕೆಳಗಿಳಿಸಿ, ಆಸ್ಪತ್ರೆಗೆ ಸೇರಿಸಲಾಗಿತ್ತು. ವಾರ್ಡನ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ರಾಘುವಿನ ಪೋಷಕರನ್ನು ಮಾತನಾಡಿಸಿಲ್ಲ.
ಮೂಲತಃ ಶಿಕಾರಿಪುರ ತಾಲೂಕು ಹೊಸೂರಿನ ರಾಘು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಊರಿನಲ್ಲಿ ದೀಪಾವಳಿ ಹಬ್ಬ ಮುಗಿಸಿ ಭಾನುವಾರ ಮಧ್ಯಾಹ್ನವಷ್ಟೇ ಹಾಸ್ಟೆಲ್ ಗೆ ಮರಳಿದ್ದ. ಮನೆಯಲ್ಲಿ ಯಾವುದೇ ತೊಂದರೆ ಇರಲಿಲ್ಲ. ರೂಮಿಗೆ ಬಂದವನೇ ಸ್ವಲ್ಪ ಸಮಯದಲ್ಲೇ ನೇಣು ಹಾಕಿಕೊಂಡಿರುವುದು ಇದೀಗ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.
ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.