– ಗುರುವಾರ ಸಂಜೆ ದುವಾ- ಶುಕ್ರವಾರ ಬೆಳಗ್ಗೆ ಗಣಹೋಮ
ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬರು ಪ್ರಾರ್ಥನೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ಮಾಡುತ್ತಿರುವ ವೀಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಹಿಂದೂ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.
ಪಂಚಾಯತ್ ಉಪಾಧ್ಯಕ್ಷ ಅಧಿಕಾರ ಸ್ವೀಕರಿಸುವ ವೇಳೆ ಮುಸ್ಲಿಂ ಮೌಲ್ವಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಗಂಗೊಳ್ಳಿಯಲ್ಲಿ ಕಾಂಗ್ರೆಸ್-ಎಸ್‌ಡಿಪಿಐ ಅಧಿಕಾರ ಹಂಚಿಕೆ ವೇಳೆ ಘಟನೆ ನಡೆದಿದೆ.
ಈ ಗ್ರಾಮ ಪಂಚಾಯಿತಿಯು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಎಸ್‌ಡಿಪಿಐ ಮುಖಂಡರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ದುವಾ ಮಾಡಿಸಿದ್ದಾರೆ.
ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ಎಂಬವರಿಗೆ ಅಧ್ಯಕ್ಷ ಸ್ಥಾನ ಹಾಗೂ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್‌ಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ವೇಳೆ ಮೌಲ್ವಿ ಕರೆಸಿ ಪ್ರಾರ್ಥನೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಗುರುವಾರ ಸಂಜೆ ದುವಾ- ಶುಕ್ರವಾರ ಬೆಳಗ್ಗೆ ಗಣಹೋಮ
ಗುರುವಾರ ಸಂಜೆ ಉಪಾಧ್ಯಕ್ಷ ತಬ್ರೇಸ್ ಮುಸ್ಲಿಂ ಧಾರ್ಮಿಕ ಪ್ರಾರ್ಥನೆ ಮಾಡಿದ ಬಗ್ಗೆ ಅಕ್ಷೇಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಸದಸ್ಯರಿಂದ ಗಂಗೊಳ್ಳಿ ಪಂಚಾಯತ್‌ನಲ್ಲಿ ಗಣಪತಿ ಹೋಮ ನಡೆಸಲಾಗಿದೆ.
ಪಂಚಾಯತ್ ಅಧ್ಯಕ್ಷೆ ಜಯಂತಿ ನೇತೃತ್ವದಲ್ಲಿ ಗಣಪತಿ ಹೋಮ ನಡೆದಿದೆ. 30 ವರ್ಷ ಬಿಜೆಪಿ ತೆಕ್ಕೆಯಲ್ಲಿದ್ದ ಪಂಚಾಯತ್ ಅಧಿಕಾರ, ಎರಡು ದಶಕದ ಬಳಿಕ ಕಾಂಗ್ರೆಸ್ ಪಾಲಾಗಿದೆ. ಎಸ್‌ಡಿಪಿಐ ಜೊತೆಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಅಧಿಕಾರ ಹಿಡಿದಿದೆ. 12 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ಗೆ ಎಸ್‌ಡಿಪಿಐನ ಏಳು ಸದಸ್ಯರು ಬೆಂಬಲ ನೀಡಿದ್ದಾರೆ. ಪಂಚಾಯತ್‌ನಲ್ಲಿ ಬಿಜೆಪಿ 12 ಸದಸ್ಯ ಬಲ ಹೊಂದಿದೆ.