ಧಾರವಾಡ: ವೈದ್ಯನೊಬ್ಬ ಮೊದಲನೇ ಹೆಂಡತಿ ಇರುವಾಗಲೇ ಎರಡನೇ ಮದುವೆ ಆಗಿ ಎರಡನೇ ಹೆಂಡತಿಗೆ ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ನಗರದ ಬಸವನಗರ ಬಡಾವಣೆಯ ನಿವಾಸಿಯಾಗಿರುವ ಸಂತೋಷ್ ವಲಾಂಡಿಕರ್ ಎಂಬ ವೈದ್ಯ ಕಳೆದ ಮೇ ತಿಂಗಳಿನಲ್ಲಿ ವಿಜಯಪುರದಲ್ಲಿ ಸುಶೀಲಾ (ಹೆಸರು ಬದಲಿಸಲಾಗಿದೆ) ಎಂಬವರನ್ನು ಮದುವೆಯಾಗಿದ್ದನು. ಮದುವೆಯಾದ ಬಳಿಕ ಸುಶೀಲಾಳನ್ನ ಧಾರವಾಡಕ್ಕೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಇರಿಸಿದ್ದರು.
ಎರಡು ತಿಂಗಳ ಕಾಲ ಮನೆಯಲ್ಲಿಯೇ ಇರಿಸಿದ್ದ ಸಂತೋಷ್ ನಾಗರಪಂಚಮಿ ಹಬ್ಬಕ್ಕೆಂದು ಸುಶೀಲಾ ಅವರ ತವರೂರಾದ ವಿಜಯಪುರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದನು. ನಂತರ ಮೂರು ತಿಂಗಳು ಕಳೆದರೂ ಸುಶೀಲಾ ಅವರನ್ನು ಕರೆದುಕೊಂಡು ಹೋಗಲು ಸಂತೋಷ್ ಬರಲಿಲ್ಲ. ಹೀಗೆ ದಿನನಿತ್ಯ ಕರೆ ಮಾಡುತ್ತಿದ್ದ ಸುಶೀಲಾ ದೂರವಾಣಿ ಕರೆಯನ್ನು ಸಂತೋಷ್ ಅವರ ಮೊದಲ ಹೆಂಡತಿ ರಿಸೀವ್ ಮಾಡಿದಾಗ ಸುಶೀಲಾ ಅವರಿಗೆ ಮೊದಲ ಮದುವೆ ಬಗ್ಗೆ ಗೊತ್ತಾಗಿದೆ.
ಮೊದಲ ಮದುವೆ ಆಗಿರುವ ಆಘಾತಕಾರಿ ವಿಷಯ ತಿಳಿದು ಸುಶೀಲಾ ಧಾರವಾಡಕ್ಕೆ ಅವರ ಸಂಬಂಧಿಕರೊಂದಿಗೆ ಬಂದು ವಿಚಾರಿಸಿದಾಗ ಸುಶೀಲಾ ಅವರನ್ನು ಕಂಡು ಡಾ. ಸಂತೋಷ್ ಓಡಿ ಹೋಗಿದ್ದಾರೆ. ಇನ್ನು ಮೊದಲ ಹೆಂಡತಿ ಪೋನ್ ರಿಸೀವ್ ಮಾಡಿ ಮೊದಲು ಮದುವೆಯಾಗಿರುವ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ಆದರೆ ಸುಶೀಲಾ ಅವರಿಗೆ ಮೊದಲನೇ ಮದುವೆ ಆಗಿರುವ ಬಗ್ಗೆ ಮಾಹಿತಿ ನೀಡದ ಸಂತೋಷ್ ವಲಾಂಡಿಕರ್ ಸುಶೀಲಾ ಅವರನ್ನ ಮನೆಯಲ್ಲಿಯೇ ಕೂಡಿ ಹಾಕಿ ಹೊರಗೆ ಬಿಡದೇ ಕಿರುಕುಳ ನೀಡಿದ್ದಾರೆ ಎಂದು ಸುಶೀಲಾ ಆರೋಪ ಮಾಡಿದ್ದಾರೆ.
ವಲಾಂಡಿಕರ್ ಹೋಮಿಯೋಪತಿ ಆಸ್ಪತ್ರೆ ಜೊತೆಗೆ ಎರಡೆರಡು ಸಂಸಾರ ನಡೆಸಿಕೊಂಡು ಹೋಗುತ್ತಿದ್ದು ಮೊದಲ ಹೆಂಡತಿ ಮಾಹಿತಿ ನೀಡಿರೋದ್ರಿಂದ ಸಿಕ್ಕಿಬಿದ್ದಿದ್ದಾನೆ. ಇನ್ನು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದರೆ ಸುಶೀಲಾ ಅವರ ದೂರು ದಾಖಲಿಸಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ನ್ಯಾಯಕ್ಕಾಗಿ ಸುಶೀಲಾ ಮತ್ತು ಅವರ ಸಂಬಂಧಿಕರು ಮಾಧ್ಯಮದ ಮೊರೆ ಹೋಗಿದ್ದಾರೆ.