– ದಲಿತರು ಕೈ ಮುಟ್ಟಿದರೆ ಸ್ನಾನ ಮಾಡ್ತಾರೆ ರೇವಣ್ಣ
ಹಾಸನ: ಲೋಕಸಭಾ ಚುನಾವಣೆ ದೇಶದ ಚುನಾವಣೆ. ಆದ್ದರಿಂದ ನಾವು ದೇಶಕ್ಕೆ ಮತ ಹಾಕಬೇಕೇ? ಕುಟುಂಬಕ್ಕಾಗಿ ಮತಹಾಕಬೇಕೇ? ಎಂದು ಪ್ರಸ್ನಿಸುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಎ.ಮಂಜು ಅವರು ಟಾಂಗ್ ಕೊಟ್ಟಿದ್ದಾರೆ.
ಬೇಲೂರಿನ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇದು ದೇಶಕ್ಕೆ ಮತ ಹಾಕುವಂತಹ ಚುನಾವಣೆ. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು. ಬಿಜೆಪಿ ಪಕ್ಷವನ್ನು ಕೋಮುವಾದಿ ಪಕ್ಷ ಎಂದು ಕರೆಯುತ್ತಾರೆ. ಇದು ಕೋಮುವಾದಿ ಪಕ್ಷವಲ್ಲ, ಉಗ್ರಗಾಮಿಗಳ ವಿರುದ್ಧ ಹೋರಾಡುವ ಪಕ್ಷ. ಆದ್ದರಿಂದ ಈಗ ನಾವು ದೇಶ ನೋಡಿ ಮತಹಾಕಬೇಕೇ? ಅಥವಾ ಕುಟುಂಬ ನೋಡಿ ಮತಹಾಕಬೇಕೇ ಎಂದು ಪ್ರಶ್ನಿಸಿ ಸಿಎಂ ಅವರ ಕಾಲೆಳೆದಿದ್ದಾರೆ.
ಕುಮಾರಸ್ವಾಮಿ ಅವರ ಪುಲ್ವಾಮ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ದಾಳಿ ಬಗ್ಗೆ ಎರಡು ವರ್ಷದ ಹಿಂದೆಯೇ ಗೊತ್ತಿತ್ತು ಅಂತಾರೆ. ಆ 40 ಯೋಧರ ಸಾವಿಗೆ ಕುಮಾರಸ್ವಾಮಿ ಅವರೂ ಸಹ ಕಾರಣ ಎಂದು ಆರೋಪಿಸಿದರು. ಅಲ್ಲದೆ ಕುಮಾರಸ್ವಾಮಿ ಅವರು ನನಗೆ ಆರೋಗ್ಯ ಸರಿಯಿಲ್ಲ. ಅದು ಇದು ಅಂತ ಹೇಳಿ ಗೆದ್ದಿದ್ದಾರೆ. ಅವರು ಸ್ವಂತ ಶಕ್ತಿಯಿಂದ ಸಿಎಂ ಅದವರಲ್ಲ. ಅವರು ಸಿಎಂ ಆಗಿದ್ದು ನಮ್ಮ ಯಡಿಯೂರಪ್ಪ ಅವರಿಂದ ಎಂದು ಹೇಳಿದರು.
ನಾನು ಅಭ್ಯರ್ಥಿ ಅದ ಮೇಲೆ ಸಚಿವ ರೇವಣ್ಣ ಎಲ್ಲರ ಮನೆಗೆ ಹೋಗ್ತಿದ್ದಾರೆ. ಈ ಹಿಂದೆ ರೇವಣ್ಣ ಎಲ್ಲಿದ್ದರು? ನಾನು ಅಭ್ಯರ್ಥಿ ಅಂತ ಘೋಷಣೆಯಾದ ಮೇಲೆ ರೇವಣ್ಣ ಎಲ್ಲರ ಮನೆ ಬಾಗಿಲಿಗೆ ಹೋಗ್ತಿದ್ದಾರೆ. ದಲಿತರು ಕೈ ಮುಟ್ಟಿದರೆ ರೇವಣ್ಣ ಸ್ನಾನ ಮಾಡ್ತಾರೆ ಎಂದು ಟೀಕಿಸಿದರು.