– ಪೆನ್ಡ್ರೈವ್ ಹಂಚಿಕೆ ಆರೋಪಿ ನವೀನ್‍ಗೌಡ ಆರೋಪ ತಳ್ಳಿಹಾಕಿದ ಶಾಸಕ
ಮೈಸೂರು: ನವೀನ್‍ಗೌಡ (Naveen Gowda) ಆರೋಪದಲ್ಲಿ ನನ್ನನ್ನು ಹಾಗೂ ನನ್ನ ಪಕ್ಷದ ನಾಯಕರನ್ನು ಪೆನ್‍ಡ್ರೈವ್ ಪ್ರಕರಣದಲ್ಲಿ (Prajwal Revanna Pendrive cas) ಸಿಲುಕಿಸುವ ಪಿತೂರಿ ಇದೆ. ಸಂಪೂರ್ಣವಾಗಿ ಜೆಡಿಎಸ್ ಪಕ್ಷವನ್ನು ಮುಗಿಸಲು ಸಂಚು ರೂಪಿಸಿದ್ದಾರೆ ಎಂದು ಶಾಸಕ ಎ.ಮಂಜು (A Manju) ಆರೋಪಿಸಿದ್ದಾರೆ.
`ರಸ್ತೆಯಲ್ಲಿ ಸಿಕ್ಕ ಪೆನ್‍ಡ್ರೈವ್ ಅನ್ನು ಶಾಸಕ ಎ. ಮಂಜು ಅವರಿಗೆ ಕೊಟ್ಟಿದ್ದೆ’ ಎಂಬ ಪೆನ್‍ಡ್ರೈವ್ ಹಂಚಿಕೆ ಆರೋಪಿ ನವೀನ್‍ಗೌಡ ಫೇಸ್‍ಬುಕ್ ಪೋಸ್ಟ್ ಕುರಿತು ಮೈಸೂರಿನಲ್ಲಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ ಪೆನ್‌ಡ್ರೈವ್ ಎ.ಮಂಜುಗೆ ಕೊಟ್ಟಿದ್ದೆ; ಬಾಂಬ್ ಸಿಡಿಸಿದ ಆರೋಪಿ ನವೀನ್‌ಗೌಡ!
ನನ್ನನು, ನಮ್ಮ ಪಕ್ಷದ ನಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆಯುತ್ತಿದೆ. ನವೀನ್‍ಗೌಡ ಕಲ್ಯಾಣ ಮಂಟಪದಲ್ಲಿ ನನಗೆ ಪೆನ್‍ಡ್ರೈವ್ ತಂದು ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾನು ಅದೇ ಕಲ್ಯಾಣ ಮಂಟಪದಲ್ಲಿದ್ದೆ ಎಂದು ಆತನಿಗೆ ಹೇಗೆ ಗೊತ್ತಿತ್ತು? ನನಗೆ ನವೀನ್‍ಗೌಡ ಯಾರು ಎಂದು ಗೊತ್ತೇ ಇಲ್ಲ ಎಂದು ಅವರು ಹೇಳಿದ್ದಾರೆ.
ನವೀನ್‍ಗೌಡ ನನ್ನ ಕ್ಷೇತ್ರದಲ್ಲಿ ಇರಬಹದು. ಪ್ರಕರಣದಿಂದ ಪಾರಾಗಲು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾನೆ. ಇಂತಹ ಹೀನ ಕೆಲಸ ಬಿಟ್ಟು ಸತ್ಯವನ್ನು ಬಹಿರಂಗ ಮಾಡಲಿ. ಇದು ನನ್ನ ಮೇಲೆ ಮಾಡುತ್ತಿರುವ ಸುಳ್ಳು ಆರೋಪ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.
ನವೀನ್ ಗೌಡ ಫೇಸ್‍ಬುಕ್ ಪೋಸ್ಟ್‌ನಲ್ಲಿ ಏನಿದೆ?
ರಸ್ತೆಯಲ್ಲಿ ಸಿಕ್ಕ ಪೆನ್‍ಡ್ರೈವ್‍ನ್ನು ಶಾಸಕ ಎ.ಮಂಜು ಅವರಿಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಹೇಳಿದ ಹಾಗೇ ಪೆನ್‍ಡ್ರೈವ್ ವೀಡಿಯೋ ವೈರಲ್ ಹಿಂದೆ ಇರುವುದು ಅರಕಲಗೋಡು ಶಾಸಕರೇ ಇರಬಹುದೇ ಎಂದು ಬರೆದುಕೊಂಡಿದ್ದಾನೆ.
ಹಾಸನ ಜಿಲ್ಲೆಯ ಬೇಲೂರಿನ ನವೀನ್ ಗೌಡ ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಂತರ ಪ್ರಜ್ವಲ್ ರೇವಣ್ಣ ವೀಡಿಯೋ ನೋಡಲು ಈ ವಾಟ್ಸಾಪ್ ಚಾನಲ್ ಫಾಲೋ ಮಾಡಿ ಎಂದು ಆತ ಪೋಸ್ಟ್ ಮಾಡಿದ್ದ. ಇದನ್ನು ಗಮನಿಸಿದ್ದ ಜೆಡಿಎಸ್ ಪೋಸ್ಟ್‍ನ ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು. ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ನವೀನ್ ಗೌಡ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿಕೊಂಡಿದ್ದ. ಬಳಿಕ ನವೀನ್ ಗೌಡನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಸದ್ಯ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ (SIT) ಅಧಿಕಾರಿಗಳು ಹಾಸನದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರಕರಣದಲ್ಲಿ ಇದೀಗ ಅಧಿಕಾರಿಗಳು ಮಾಜಿ ಶಾಸಕ ಪ್ರೀತಂಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಹಾಗೂ ಅವರ ಆಪ್ತ ಲಿಖಿತ್‍ನನ್ನು ಪೆನ್ ಡ್ರೈವ್ ಇಟ್ಟುಕೊಂಡಿದ್ದ ಆರೋಪದ ಮೇಲೆ ವಶಕ್ಕೆ ಪಡೆದುಕೊಂಡಿದ್ದಾರೆ. ನವೀನ್ ಮತ್ತಿತರರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: SSLC ವಿದ್ಯಾರ್ಥಿನಿ ಹತ್ಯೆ; ಕೊಡವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು!