ಕೋಲಾರ: ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ಜನರನ್ನು ವಂಚಿಸುತ್ತಿದ್ದ ಹಾಗೂ ಹಲವಾರು ರಾಬರಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬೆಂಗಳೂರಿನ ಪ್ರಖ್ಯಾತ ಸೆಕ್ಯೂರಿಟಿ ಏಜೆನ್ಸಿ ಮಾಲೀಕನನ್ನ ಕೋಲಾರ ಜಿಲ್ಲೆ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರಿನ ಫ್ರೇಜರ್ ಟೌನ್ ನಲ್ಲಿರುವ ಡ್ಯಾನ್ ಡಿಟೆಕ್ಟೀವ್ ಅಂಡ್ ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಡ್ಯಾನಿಯಲ್ ಎಂದು ಗುರುತಿಸಲಾಗಿದೆ. ಆರೋಪಿ ಹಲವೆಡೆ ತಾನೊಬ್ಬ ನಿವೃತ್ತ ಸೇನಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ. ಅಲ್ಲದೆ ಡಬ್ಲಿಂಗ್ ವ್ಯವಹಾರ ಸೇರಿದಂತೆ ಹಲವಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ.
Advertisement
Advertisement
ಕೆಲ ತಿಂಗಳ ಹಿಂದೆ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ ಐದು ಲಕ್ಷ ರೂಪಾಯಿ ವಂಚನೆ ಮಾಡಿದ್ದ ಪ್ರಕರಣದಡಿಯಲ್ಲಿ ಸದ್ಯ ಬಂಗಾರಪೇಟೆ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನಿಂದ ಒಂದು ನಕಲಿ ಪೊಲೀಸ್ ಜೀಪ್ ಹಾಗೂ ಲಕ್ಷಾಂತರ ರೂಪಾಯಿ ಹಣ ವಶಪಡಿಸಿಕೊಂಡಿದ್ದಾರೆ.
Advertisement
ಬಂಧಿತ ಆರೋಪಿ ರಾಜ್ಯದ ಹಾಗೂ ದೇಶದ ಪ್ರಮುಖ ಗಣ್ಯ ವ್ಯಕ್ತಿಗಳ ಜೊತೆಗೆ ಫೋಟೋ ತೆಗೆಸಿಕೊಂಡು ವೆಬ್ ಸೈಟ್ ನಲ್ಲಿ ಹಾಕಿಕೊಂಡಿದ್ದಾನೆ. ಅಲ್ಲದೆ ತನಗೆ ರಾಜ್ಯದ ಹಿರಿಯ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿಕೊಂಡು ಬೆದರಿಸುತ್ತಿದ್ದ ಎಂದು ತಿಳಿದುಬಂದಿದೆ.
Advertisement
ಗಣ್ಯರೊಂದಿಗಿನ ತನ್ನ ಫೋಟೋ ತೋರಿಸಿ ವಂಚಿಸುತ್ತಿದ್ದ ಎನ್ನಲಾಗಿದ್ದು, ನಗರಾಭಿವೃದ್ದಿ ಸಚಿವ ಜಾರ್ಜ್ ಆಪ್ತ ಎಂದು ಕೂಡ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿ ಡ್ಯಾನಿಯಲ್ ನನ್ನು ಬಂಗಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.