ಬೆಂಗಳೂರು: ಇಲ್ಲಿನ ಹೊಸಹಳ್ಳಿ ಮೆಟ್ರೋ ರೈಲು ನಿಲ್ದಾಣದಲ್ಲಿ (Hosahalli Metro Stations) ಪ್ರಯಾಣಿಕನೊಬ್ಬ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಸುಮಾರು ರಾತ್ರಿ 8.56 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಪ್ರಯಾಣಿಕನ ತಲೆಗೆ ಗಂಭೀರ ಪೆಟ್ಟಾಗಿದ್ದು, ಕೂಡಲೇ ಮುಂದಿನ ಚಿಕಿತ್ಸೆಗೆ ಆಸ್ಪತ್ರೆಗೆ (Hospital) ಕರೆದೊಯ್ಯಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಪಘಾತ ಸಂಭವಿಸಿದ ಕೂಡಲೇ ರಾತ್ರಿ 8:56 ಗಂಟೆಗೆ ರೈಲುಗಳು ಶಾರ್ಟ್ ಲೂಪ್ ಸರ್ವಿಸ್ ಚಲ್ಲಘಟ್ಟದಿಂದ ಮೈಸೂರು ರಸ್ತೆ ವರೆಗೆ ಹಾಗೂ ನಾಡಪ್ರಭು ಕೆಂಪೇಗೌಡ ಸ್ಟೇಟ್‌ನಿಂದ ವೈಟ್ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆ ವಾಣಿಜ್ಯ ಸೇವೆಯನ್ನು ನಡೆಸಲಾಯಿತು. ರಾತ್ರಿ 9.30 ಗಂಟೆಯಿಂದ ಸಂಪೂರ್ಣ ನೇರಳೆ ಮಾರ್ಗದಲ್ಲಿ ಎಂದಿನಂತೆ ರೈಲು ಸೇವೆ ಪುನರ್ ಆರಂಭಿಸಲಾಗಿದೆ ಎಂದು ಮೆಟ್ರೋ ಸಿಬ್ಬಂದಿ ತಿಳಿಸಿದ್ದಾರೆ.
ಸದ್ಯ ಮೆಟ್ರೋ ಹಳಿ ಮೇಲೆ ಬಿದ್ದ ವ್ಯಕ್ತಿಯನ್ನು ಬೆಂಗಳೂರು ಬಸವೇಶ್ವರ ನಗರದ ನಿವಾಸಿ ಎಂ.ಸಾಗರ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಗೋವಿಂದರಾಜನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ನಡುವೆ ಸಾಗರ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿಲ್ಲ, ಸ್ಲಿಪ್ ಆಗಿ ಮೆಟ್ರೋ ಹಳಿಗೆ ಬಿದ್ದಿದ್ದಾನೆ ಎಂಬುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.