ಬಳ್ಳಾರಿ: ವಿಧಾನಸಭಾ ಕಲಾಪದಲ್ಲಿ ಹಾಗೂ ಇತ್ತೀಚೆಗೆ ಮಾಧ್ಯಮಗಳ ಮುಂದೆ ಪ್ರತ್ಯೇಕ ರಾಜ್ಯದ ಕುರಿತಾಗಿ ಮಾತನಾಡಿದ್ದ ಶಾಸಕ ಶ್ರೀರಾಮುಲು ಪರ ಹಾಗೂ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿಬರುತ್ತಿದೆ.
ಕನ್ನಡವನ್ನೇ ಸರಿಯಾಗಿ ಮಾತನಾಡಲು ಬಾರದ, ಆಂಧ್ರ ಪ್ರದೇಶದಿಂದ ಈ ವ್ಯಕ್ತಿ ಕರ್ನಾಟಕ ಎರಡು ಭಾಗವಾಗಬೇಕು ಎನ್ನುತ್ತಿದ್ದಾರೆ. ಎಂತಹ ಸುವರ್ಣ ಕಾಲ ಬಂದು ನೋಡಿ ಕನ್ನಡಿಗರಿಗೆ ಎಂದು ಶ್ರೀರಾಮುಲು ಚಿತ್ರ ಬಳಕೆ ಮಾಡಿ, ಬರೆದು ಅಮರನಾಥ್ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮರನಾಥ್ ಪೋಸ್ಟ್ ನಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಭಾರೀ ವಿರೋಧ ಹಾಗೂ ಬೆಂಬಲದ ಕಮೆಂಟ್‍ಗಳು ಹರಿದಾಡುತ್ತಿವೆ.
ಶ್ರೀರಾಮುಲು ಹೇಳಿದ್ದೇನು?
ಜೆಡಿಎಸ್ ಸೋತಿರುವ ಕ್ಷೇತ್ರಗಳ ಮೇಲೆ ಸೇಡನ್ನು ಬಜೆಟ್ ಮೂಲಕ ಸಿಎಂ ಎಚ್.ಡಿಕುಮಾರಸ್ವಾಮಿ ಅವರು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ನಾನು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಶಾಸಕ ಬಿ.ಶ್ರೀರಾಮುಲು ಅವರು ಹೇಳಿದ್ದರು. ವಿಧಾನಸಭೆ ಅಷ್ಟೇ ಅಲ್ಲದೆ ಇತ್ತೀಚೆಗೆ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟದ ನಾಯಕತ್ವ ವಹಿಸಿಕೊಳ್ಳಲು ನಾನು ಸಿದ್ಧ ಎಂದು ತಿಳಿಸಿದ್ದರು.