ಬೆಂಗಳೂರು: ರೈಲು ನಿಲ್ದಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು 25 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ನಗರದ ಕಾಟನ್ ಪೇಟೆ ಪೊಲೀಸರು ಹಾವೇರಿಯ ವ್ಯಾಪಾರಿಯೊಬ್ಬನನ್ನು ಬಂಧಿಸಿದ್ದಾರೆ. ಅತ್ಯಾಚಾರ ಬೆಂಗಳೂರಿನಲ್ಲಿ ನಡೆದ ಕಾರಣ ಪ್ರಕರಣ ಈಗ ಬೆಂಗಳೂರಿನ ಕಾಟನ್ ಪೇಟೆ ಠಾಣೆಗೆ ವರ್ಗಾವಣೆಯಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವಿವರ: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ವಾಸವಾಗಿರುವ ಈ ಮಹಿಳೆ ಕೆಲ ತಿಂಗಳ ಹಿಂದೆ ಹಾವೇರಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ರೈಲಿನಲ್ಲಿ ಹೊರಟಿದ್ದಾಳೆ. ಹಾವೇರಿಯ ಕರಜಗಿಯ ರೈಲು ನಿಲ್ದಾಣದಲ್ಲಿ ಈ ಮಹಿಳೆಗೆ ಮರಿಕುಮಾರ್ ಎಂಬಾತನ ಪರಿಚಯವಾಗಿದೆ. ಮಾತುಕತೆ ವೇಳೆ ಈತ ನಾನು ದಿನಸಿ ಅಂಗಡಿಗಳಿಗೆ ವಸ್ತುಗಳನ್ನು ಪೂರೈಸುವ ಬ್ಯುಸಿನೆಸ್‍ಮ್ಯಾನ್ ಎಂದು ಪರಿಚಯಿಸಿಕೊಂಡಿದ್ದಾನೆ. ಇದಾದ ಬಳಿಕ ಇಬ್ಬರೂ ಫೋನಲ್ಲಿ ಮಾತುಕತೆ ಮುಂದುವರೆಸಿದ್ದಾರೆ.
Advertisement
Advertisement
ಅಕ್ಟೋಬರ್ 4ರಂದು ಆರೋಪಿ ಮರಿಕುಮಾರ್ ಶಂಕರ್ ಕರಡಗಿ ಮಹಿಳೆಗೆ ಫೋನ್ ಮಾಡಿ ಯಶವಂತಪುರ ರೈಲು ನಿಲ್ದಾಣದಲ್ಲಿ ಭೇಟಿಯಾಗುವಂತೆ ಹೇಳುತ್ತಾನೆ. ಈ ಮಹಿಳೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಯಶವಂತಪುರ ರೈಲು ನಿಲ್ದಾಣಕ್ಕೆ ಬಂದ ಮಹಿಳೆಯನ್ನು ಆತ ನಿನ್ನ ಬಳಿ ನನಗೆ ಕೆಲವು ವಿಚಾರ ಮಾತನಾಡುವುದು ಇದೆ ಎಂದು ಹೇಳಿ ಆಕೆಯನ್ನು ಕಾಟನ್ ಪೇಟೆಯಲ್ಲಿರುವ ಲಾಡ್ಜ್ ಗೆ ಕರೆದೊಯ್ದಿದ್ದಾನೆ. ಲಾಡ್ಜ್ ನಲ್ಲಿ ಆತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಕಾಟನ್ ಪೇಟೆ ಪೊಲೀಸರು ಹೇಳಿದ್ದಾರೆ.
Advertisement
ಇದಾದ ಬಳಿಕ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿರುವ ತನ್ನ ಸಂಬಂಧಿಕರ ಮನೆಗೂ ಬರಬೇಕೆಂದು ಬೆದರಿಕೆ ಹಾಕಿದ್ದಾನೆ. ಚಿಕ್ಕನಾಯಕನಹಳ್ಳಿಯಲ್ಲಿಯೂ ನನ್ನ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆತ ನನ್ನನ್ನು ಹಾವೇರಿಗೆ ಕರೆತಂದಿದ್ದಾನೆ. ಅಲ್ಲಿ ಮರಿಕುಮಾರ್ ಸಹೋದರ ಹಾಗೂ ಸಂಬಂಧಿಕರು ಮರಿಕುಮಾರ್ ಮನೆಯಲ್ಲಿಯೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅತ್ಯಾಚಾರಕ್ಕೀಡಾದ ಮಹಿಳೆ ಹಾವೇರಿ ಗ್ರಾಮಾಂತರ ಪೊಲೀಸರಿಗೆ ಅಕ್ಟೋಬರ್ 30ರಂದು ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
Advertisement
ಹಾವೇರಿಯಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ನಾವು ಮರಿಕುಮಾರನನ್ನು ಹಾವೇರಿಯ ಮನೆಯಲ್ಲಿ ಬಂಧಿಸಿದ್ದೇವೆ. ಆತ ಈಗ ನ್ಯಾಯಾಂಗ ವಶದಲ್ಲಿದ್ದಾನೆ. ಬೆಂಗಳೂರಿನ ಕಾಟನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದರಿಂದ ನಾವು ಪ್ರಕರಣವನ್ನು ಕಾಟನ್ ಪೇಟೆ ಠಾಣೆಗೆ ವರ್ಗಾಯಿಸಿದ್ದೇವೆ ಎಂದು ಹಾವೇರಿ ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಕೈಸೇರಿದ್ದು ನಾವು ಪ್ರಕರಣದ ತನಿಖೆಯನ್ನು ಮುಂದುವರಿಸುತ್ತೇವೆ ಎಂದು ಕಾಟನ್ ಪೇಟೆ ಪೊಲೀಸರು ಹೇಳಿದ್ದಾರೆ.