– ಇಬ್ಬರು ಹುಡುಗಿಯರನ್ನು ಪ್ರೀತಿಸಿ ಒಂದೇ ಬಾರಿ ಮದುವೆಯಾಗಿದ್ದ ಆರೋಪಿ
ಬೆಂಗಳೂರು: ಇಬ್ಬರು ಹುಡುಗಿಯರನ್ನು ಪ್ರೀತಿಸಿ ಒಪ್ಪಿಸಿ ಮದುವೆಯಾಗಿದ್ದ. ಮೊದಲ ಹೆಂಡತಿಗೆ ಅನೈತಿಕ ಸಂಬಂಧ ಶಂಕೆ ವಿಚಾರವಾಗಿ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ.
- Advertisement 2-
ಆನೇಕಲ್ ತಾಲೂಕಿನ ರಾಚಮಾರನ ಹಳ್ಳಿ ಗ್ರಾಮದ ನಿವಾಸಿ ಬಾಬು, ಕಳೆದ 9 ವರ್ಷಗಳ ಹಿಂದೆ ಇಬ್ಬರು ಹುಡುಗಿಯರನ್ನು ಪ್ರೀತಿಸಿ ಇಬ್ಬರಿಗೂ ಒಂದೇ ಮಂಟಪದಲ್ಲಿ ತಾಳಿ ಕಟ್ಟಿದ್ದ. ಮೊದಲ ಪತ್ನಿಗೆ ಎರಡು ಮಕ್ಕಳು ಹಾಗೂ ಎರಡನೇ ಪತ್ನಿಗೂ ಎರಡು ಮಕ್ಕಳು ಇದ್ದರು. ಮೊದಲನೇ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಮೇಲೆ ಆಗಾಗ ಜಗಳವಾಗುತ್ತಿತ್ತು. ಕಳೆದ ಭಾನುವಾರವೂ ಇದೇ ರೀತಿ ಜಗಳವಾಗಿದ್ದು, ಈ ವೇಳೆ ಹೆಂಡತಿಗೆ ಬಾಬು ಹೊಡೆದಿದ್ದಾನೆ. ಅನಂತರ ಸೋಮವಾರ ಬೆಳಗ್ಗೆ ಆಕೆಯನ್ನು ಎಬ್ಬಿಸಿ ಆಕೆಗೆ ಅಂಬಲಿ ಕುಡಿಸಿ ಮಲಗಿಸಿದ್ದಾನೆ. ಅವನ ಹೊಡೆತದ ನೋವು ತಡೆದುಕೊಳ್ಳಲಾಗದೆ ನಿನ್ನೆ ಸಾವನ್ನಪ್ಪಿದ್ದಾಳೆ.
- Advertisement 3-
ರಾತ್ರಿ ಇಡೀ ಆಕೆಯ ಮೃತದೇಹದ ಜೊತೆ ಕಾಲ ಕಳೆದ ಗಂಡ ಇಂದು ಪೊಲೀಸರಿಗೆ ಶರಣಾಗಿದ್ದಾನೆ. ಮೃತ ಮಹಿಳೆ ಮೂಲತಃ ಮೈಸೂರಿನವಳಾಗಿದ್ದು, 9 ವರ್ಷದ ಹಿಂದೆ ಬಾಬುವನ್ನು ಪ್ರೀತಿಸಿ ಮದುವೆಯಾಗಿದ್ದಳು. ಅಲ್ಲದೇ, ಇದೇ ಜ.25 ರಂದು ಆಕೆ ಬೇರೊಬ್ಬರೊಂದಿಗೆ ಓಡಿ ಹೋಗಿದ್ದಳು. ಅನಂತರ ಮಾ.3 ರಂದು ಪೊಲೀಸರು ಆಕೆಯ ಜೊತೆ ಮಾತನಾಡಿ ಮತ್ತೆ ವಾಪಸ್ ಕರೆತರಲಾಗಿತ್ತು ಎಂಬ ಮಾಹಿತಿ ಸಹ ಲಭ್ಯವಾಗಿದೆ. ವಾಪಸ್ ಬಂದಾಗಿನಿಂದ ಗಂಡ ಹೆಂಡ್ತಿ ನಡುವೆ ಆಗಾಗ ಸಣ್ಣ ಸಣ್ಣ ಜಗಳಗಳು ನಡೆಯುತ್ತಿತ್ತು ಎಂಬುದು ಕುಟುಂಬಸ್ಥರ ಮಾತಾಗಿದೆ.
- Advertisement 4-
ಅತ್ತಿಬೆಲೆ ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೇಕಲ್ ಉಪ ವಿಭಾಗ ಡಿವೈಎಸ್ಪಿ ಮೋಹನ್ ಹಾಗೂ ಅಡಿಷನಲ್ ಎಸ್‌ಪಿ ನಾಗೇಶ್ ಕುಮಾರ್ ಸಹ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಕ್ಸ್ಫರ್ಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.