ಆನೇಕಲ್: ಆತ ಪ್ರೀತಿ ನೆಪದಲ್ಲಿ ಕೈಗೊಂದು ಕೂಸು ಕೊಟ್ಟು ಬೆಂಗಳೂರು ಸೇರಿಕೊಂಡಿದ್ದ. ಆಕೆ ದೂರದ ಒಡಿಶಾದಿಂದ ಹೆತ್ತವರ ಧಿಕ್ಕರಿಸಿ ಪತಿಗಾಗಿ ತವರು ಬಿಟ್ಟಿದ್ದಳು. ಆದರೆ, ತನಗಾಗಿ ಬಂದವಳನ್ನು ಪುಟ್ಟ ಮಗುವಿನ ಮುಂದೆಯೇ ತಡರಾತ್ರಿ ಪತಿಯೇ ಕೊಂದು ಮುಗಿಸಿ ಪರಾರಿಯಾಗಿದ್ದಾನೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ವಾಬಸಂದ್ರ ಬಳಿಯ ನಂಜಾರೆಡ್ಡಿ ಬಡಾವಣೆಯಲ್ಲಿ ತಡರಾತ್ರಿ ನಡೆದಿದೆ. ಒಡಿಶಾ ಮೂಲದ ಬರ್ಸಾ ಪ್ರಿಯದರ್ಶಿನಿ ಮೃತ ದುರ್ದೈವಿ. ಬಿಹಾರ ಮೂಲದ ಸೋಹನ್ ಕುಮಾರ್ ಪತ್ನಿಯನ್ನು ಕೊಂದ ಪಾಪಿ ಪತಿ. ಆರೋಪಿ ಸೋಹನ್ ಕುಮಾರ್ ಜೊತೆ ಬಾಳ್ವೆ ನಡೆಸಲು ಬರ್ಸಾ ಪ್ರಿಯದರ್ಶಿನಿ ಕಳೆದ ಶನಿವಾರ ಒಡಿಶಾದಿಂದ ಬಂದಿದ್ದಳು. ಆದರೆ, ನಿನ್ನೆ ರಾತ್ರಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದ ಆರೋಪಿ ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಕುಡಿದ ನಶೆಯಲ್ಲಿ ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ. ಆದರೆ, ಪುಟ್ಟ ಮಗು ಜೋರಾಗಿ ಅಳುತ್ತಿರುವುದನ್ನು ಗಮನಿಸಿ ಮನೆಯ ಮಾಲಕಿ ಹೊರ ಬಂದಿದ್ದು, ಆರೋಪಿ ಸೋಹನ್ ಕುಮಾರ್ ಪರಾರಿಯಾಗಿದ್ದಾನೆ.
ಮೃತ ಬರ್ಸಾ ಪ್ರಿಯದರ್ಶಿನಿ ಮತ್ತು ಸೋಹನ್ ಕುಮಾರ್ ಪರಸ್ಪರ ಪ್ರೀತಿಸಿ ತಮಿಳುನಾಡಿನಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ಸೋಹನ್ ಕುಮಾರ್ ಸ್ವಗ್ರಾಮ ಬಿಹಾರಕ್ಕೆ ತೆರಳಿದ್ದರು. ಆದರೆ, ಸೋಹನ್ ಕುಮಾರ್ ಪೋಷಕರು ಬರ್ಸಾ ಪ್ರಿಯದರ್ಶಿನಿಯನ್ನು ತಮ್ಮ ಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅಲ್ಲಿಂದ ಪತ್ನಿ ತವರೂರು ಒಡಿಶಾಗೆ ಬಂದಿದ್ದ ಸೋಹನ್ ಕುಮಾರ್ ಆರೇ ತಿಂಗಳಿಗೆ ಬೆಂಗಳೂರಿಗೆ ಬಂದು ಬಿಟ್ಟಿದ್ದ. ಪತ್ನಿಗೆ ಗಂಡು ಮಗು ಜನಿಸಿದರೂ, ಅತ್ತ ತಲೆ ಕೂಡ ಹಾಕಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಬರ್ಸಾ ಪ್ರಿಯದರ್ಶಿನಿ ಪೋಷಕರು ಬೇರೆ ಮದುವೆ ಆಗುವಂತೆ ಒತ್ತಾಯಿಸಿದ್ದರು. ಆದರೆ, ಪತಿಯೇ ಬೇಕು ಎಂದು ಹೆತ್ತವರ ಧಿಕ್ಕರಿಸಿ ಬೆಂಗಳೂರಿಗೆ ಬಂದು ಕೊಲೆಯಾಗಿ ಹೋಗಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಜಿಗಣಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಆಕ್ಸ್‌ಫರ್ಡ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.