ರಾಮನಗರ: ಆತ 5 ವರ್ಷಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿ ಹೂತುಹಾಕಿದ್ದ. ಬಳಿಕ ಹೆಂಡತಿ ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆಂದು ಕುಟುಂಬಸ್ಥರಿಗೆ ನಂಬಿಸಿ ಪ್ರಕರಣವನ್ನು ಮುಚ್ಚಿ ಹಾಕಿ ಸೈಲೆಂಟ್ ಆಗಿದ್ದ. ಆದರೆ, ಇತ್ತೀಚೆಗೆ ಸ್ನೇಹಿತನ ಹೆಂಡತಿ ಕೊಲೆಯಲ್ಲಿ ಭಾಗಿಯಾಗಿ ಪೊಲೀಸರಿಗೆ ತಗಲಾಕಿಕೊಂಡಿರುವ ಆರೋಪಿ ತನ್ನ ಪತ್ನಿ ಕೊಲೆ ಬಗ್ಗೆಯೂ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಹೌದು, ಆರೋಪಿ ಹೆಸರು ಕಿರಣ್ ಕುಮಾರ್. ಮಾಗಡಿ ತಾಲೂಕಿನ ಹೂಜಗಲ್ ಗ್ರಾಮದ ನಿವಾಸಿ. ಕಳೆದ 10 ವರ್ಷಗಳ ಹಿಂದೆ ತಾವರೆಕೆರೆಯ ಪೂಜಾ ಎಂಬಾಕೆಯನ್ನು ಮದುವೆ ಆಗಿದ್ದ. ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ಅಗಾಗ್ಗೆ ನ್ಯಾಯ ಪಂಚಾಯಿತಿ ಕೂಡ ಆಗಿತ್ತು. ನಂತರ 2019 ರಲ್ಲಿ ಹೆಂಡತಿಯ ನಡತೆ ಶಂಕಿಸಿ ಕೊಲೆಗೈದು ಗ್ರಾಮದ ಪಕ್ಕದ ಚೀಲೂರು ಫಾರೆಸ್ಟ್‌ನಲ್ಲಿ ಸ್ನೇಹಿತರಿಬ್ಬರ ಜೊತೆಗೂಡಿ ಹೂತುಹಾಕಿದ್ದ. ಆದರೆ ಫಾರೆಸ್ಟ್‌ನಲ್ಲಿ ಟ್ರಂಚ್ ತೋಡುವ ಕೆಲಸ ಆರಂಭವಾದಾಗ ನಾಲ್ಕು ತಿಂಗಳ ನಂತರ ಹೆಣವನ್ನು ಹೊರತೆಗೆದು, ಕಳೆಬರಗಳನ್ನ ಸುಟ್ಟು ಮಣ್ಣು ಮುಚ್ಚಿದ್ದ. ಸಂಬಂಧಿಕರಿಗೆ ತನ್ನ ಹೆಂಡತಿ ಬೇರೊಬ್ಬನ ಜೊತೆ ಓಡಿಹೋಗಿ ಮದುವೆಯಾಗಿದ್ದಾಳೆಂದು ನಂಬಿಸಿದ್ದ ಆಸಾಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: Video | ಆ.31ಕ್ಕೆ ಪವಿತ್ರಾಗೌಡ ಬೇಲ್ ಭವಿಷ್ಯ – ಅಲ್ಲಿವರೆಗೂ ಜೈಲೇ ಗತಿ
ಕಳೆದ 20 ದಿನಗಳ ಹಿಂದೆ ಇದೆ ಹೂಜಗಲ್ ಪಕ್ಕದ ಬೆಟ್ಟದಲ್ಲಿ ಸ್ನೇಹಿತ ಹೆಂಡತಿ ಕೊಲೆ ಕೇಸ್‌ನಲ್ಲಿ ಮಾಗಡಿ ಪೊಲೀಸರಿಗೆ ತಗಲಾಕಿಕೊಂಡಿದ್ದ ಕಿರಣ್ ಪೊಲೀಸರ ವಿಚಾರಣೆ ವೇಳೆ ತನ್ನ ಹೆಂಡತಿ 10 ವರ್ಷಗಳ ಹಿಂದೆಯೆ ಕಾಣೆಯಾಗಿದ್ದಾಳೆ. ಮಿಸ್ಸಿಂಗ್ ಪ್ರಕರಣ ಕೂಡಾ ದಾಖಲಿಸಿದ್ದಾಗಿ ಹೇಳಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಮೃತ ಪೂಜಾಳ ತಾಯಿ ಗೌರಮ್ಮಳನ್ನು ಸಂಪರ್ಕಿಸಿದ 5 ವರ್ಷದ ಹಿಂದೆ ಮಗಳು ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆಂದು ತನ್ನ ಅಳಿಯ ಹೇಳಿದ್ದಾನೆ ಎಂದಿದ್ದಳು. ಇದರಿಂದ ಪೊಲೀಸರಿಗೆ ಮತ್ತಷ್ಟು ಅನುಮಾನ ಹೆಚ್ಚಾಗಿ, ಬಳಿಕ ಮಿಸ್ಸಿಂಗ್ ಕಂಪ್ಲೆಂಟ್ ಹುಡುಕಿದ ಪೊಲೀಸರಿಗೆ ಆ ಕಂಪ್ಲೆಂಟ್ ಸಿಕ್ಕದಿದ್ದಾಗ ಆತನ ಸ್ನೇಹಿತರಾದ ಭರತ್ ಹಾಗೂ ಕುಮಾರ್‌ನನ್ನು ವಿಚಾರಿಸಿದ್ದಾರೆ. ಆಗ ಸತ್ಯ ಬಯಲಾಗಿದೆ.
ಒಂದು ಕೊಲೆ ಕೇಸ್ ಭೇದಿಸಲು ಹೋದ ಪೊಲೀಸರಿಗೆ 5 ವರ್ಷದ ಹಳೆಯ ಪ್ರಕರಣ ಬೆಳಕಿಗೆ ಬಂದಾಕ್ಷಣ ಜೈಲಿನಲ್ಲಿದ್ದ ಆರೋಪಿ ಕಿರಣ್ ನನ್ನ ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಿರಣ್ ಸತ್ಯ ಬಾಯ್ಬಿಟ್ಟಿದ್ದಾನೆ. ಆದರೆ ಕುತೂಹಲದ ವಿಷಯ ಏನಂದರೆ ದೃಶ್ಯ ಸಿನಿಮಾದಲ್ಲಿ ಹೂತಿಟ್ಟಿದ್ದ ಶವವನ್ನು ಬೇರೆಡೆಗೆ ಸ್ಥಳಾಂತರಿಸುವುದನ್ನ ಗಮನಿಸಿದ್ದ ಈತ, ಅರಣ್ಯದಲ್ಲಿ ಟ್ರಂಚ್ ಕಾಮಗಾರಿ ಆರಂಭವಾಗುತ್ತಿದ್ದಂತೆ, ಎಲ್ಲಿ ಹೆಣ ಹೂತಿರುವುದು ಗೊತ್ತಾಗುತ್ತೋ ಎಂದು ಹೆಣವನ್ನು ಹೊರತೆಗೆದು ತನ್ನ ಜಮೀನಿನಲ್ಲಿ ಸುಟ್ಟು ಮತ್ತೆ ಮಣ್ಣು ಮುಚ್ಚಿದ್ದಾನೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿದಾಗ ಹೂತಿಟ್ಟ ಶವದ ಮೂಳೆಗಳು ಪತ್ತೆಯಾಗಿವೆ. ಬಳಿಕ ಕಿರಣ್ ಹಾಗೂ ಆತನ ಸ್ನೇಹಿತರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟ ಪ್ರಕರಣ – ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ