ಮೈಸೂರು: ದನ ಮೇಯಿಸಲು ಹೋಗಿದ್ದ ರೈತ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಡೆದಿದೆ.
ರಾಜಶೇಖರ (58) ಮೃತ ವ್ಯಕ್ತಿ. ಇವರು ಜಮೀನಿನಲ್ಲಿ ದನ ಮೇಯಿಸುವಾಗ ಹುಲಿ ಏಕಾಏಕಿ ದಾಳಿ ನಡೆಸಿ ಕೊಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಣ್ಣೆಗೆರೆ ಗ್ರಾಮದ ಅರಣ್ಯದ ಬಳಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಹುಲಿ ದಾಳಿ ಹೆಚ್ಚುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅವರು, ಕಾಡಿಗೆ ದನ ಮೇಯಿಸಲು ಹೋಗುವವರು, ಕಾಡಿನಂಚಿನ ಗ್ರಾಮಗಳ ನಿವಾಸಿಗಳು ಮತ್ತು ತೋಟದ ಕೆಲಸಗಾರರು ಹುಲಿ, ಚಿರತೆ, ಆನೆ ಇತ್ಯಾದಿ ವನ್ಯಜೀವಿಗಳ ಸಂಚಾರದ ಮಾಹಿತಿ ಇದ್ದಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.
ದನ ಮೇಯಿಸಲು ರಾಜಶೇಖರ ಎಂಬವರು ತೆರಳಿದ್ದ ವೇಳೆ ಹುಲಿ ದಾಳಿ ಮಾಡಿದೆ ಎನ್ನಲಾಗಿದ್ದು, ಇದೊಂದು ತೀವ್ರ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತರ ಕುಟುಂಬದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.
ಹುಲಿ ದಾಳಿ ನಡೆದಿರುವ ಸ್ಥಳಕ್ಕೆ ಕೂಡಲೇ ಧಾವಿಸಿ, ಮಾನವನ ರಕ್ತದ ರುಚಿ ಕಂಡಿರುವ ಹುಲಿಯ ಸೆರೆಗೆ ತುರ್ತು ಕ್ರಮ ವಹಿಸಲು ಮತ್ತು ಮೃತರ ಕುಟುಂಬದವರಿಗೆ ಪರಿಹಾರ ನೀಡಲು ಸೂಚಿಸಿರುವುದಾಗಿಯೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.


