ರಾಮನಗರ: ಹಳ್ಳದಲ್ಲಿ ನೀರು ಹರಿಯುವುದನ್ನು ವಿಡಿಯೋ ತೆಗೆಯಲು ಹೋಗಿ ನಿಂತಿದ್ದ ಜಾಗದಲ್ಲಿ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಅರಳಿಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಅರಳಿಮರದದೊಡ್ಡಿ ಗ್ರಾಮದ ನಿವಾಸಿ ನಂದೀಶ್ ಮೃತ ದುರ್ದೈವಿ. ಇಂದು ಬೆಳಿಗ್ಗೆ ವಾಯುವಿಹಾರಕ್ಕೆಂದು ಹೋಗಿದ್ದ ವೇಳೆಯಲ್ಲಿ ನಂದೀಶ್ ಅಕ್ರಮ ಮರಳುಗಾರಿಕೆಯಿಂದ ಉಂಟಾಗಿದ್ದ ಹಳ್ಳದಲ್ಲಿ ಹರಿಯುತ್ತಿದ್ದ ಮಳೆಯ ನೀರು ಹಾಗೂ ಮರಳುಗಾರಿಕೆಯಿಂದ ಹಾಳಾದ ಭೂಮಿಯ ವಿಡಿಯೋ ಮಾಡುತ್ತಿದ್ದರು. ಹೀಗೆ ವಿಡಿಯೋ ಮಾಡುತ್ತಾ ನಿಂತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದಿದೆ. ಪರಿಣಾಮ ಕೆಸರು ಮಿಶ್ರಿತ ನೀರಾಗಿದ್ದರಿಂದ ಹೊರಗೆ ಬರಲಾಗದೆ ಸಾವನ್ನಪ್ಪಿದ್ದಾರೆ.
Advertisement
ಕಳೆದ ಆರು ತಿಂಗಳಿಂದ ಈ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆದು ಸುಮಾರು ಅರ್ಧ ಕಿಲೋಮೀಟರ್ ವರಗೆ 50 ಅಡಿಗಳಷ್ಟು ಆಳದ ಗುಂಡಿ ಉಂಟಾಗಿತ್ತು. ಕೆಲವು ದಿನಗಳಿಂದ ಸುರಿದ ಮಳೆಯಿಂದ ಗುಂಡಿ ತುಂಬಿ ಕಟ್ಟೆ ಹೊಡೆದು ಅಕ್ಕಪಕ್ಕದ ಜಮೀನಿನ ಭೂ ಕುಸಿತ ಉಂಟಾಗಿತ್ತು. ಇನ್ನು ಶುಕ್ರವಾರದಿಂದ ಸುರಿಯುತ್ತಿರೋ ಭಾರೀ ಮಳೆಗೆ ಹಳ್ಳದಲ್ಲಿ ನೀರು ಹರಿದು ಬರುತ್ತಿದೆ. ಇದನ್ನು ವೀಡಿಯೋ ಮಾಡುವ ವೇಳೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಸ್ಥಳಿಯರು ತಿಳಿಸಿದರು.
Advertisement
ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶೋಧ ಕಾರ್ಯನಡೆಸುತ್ತಿದ್ದಾರೆ.