ಹುಬ್ಬಳ್ಳಿ: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ಗ್ರಾಮದ ಕೆರೆ ನೀರನ್ನೇ (Lake Water) ಗ್ರಾಮಸ್ಥರು ಖಾಲಿ ಮಾಡುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಷ್ಟೇ ಕೇಳಿಕೊಂಡರು ಕೆರೆ ನೀರು ಬೇಡವೇ ಬೇಡ ಅಂತ ಪಟ್ಟು ಹಿಡಿದ ಗ್ರಾಮಸ್ಥರು ಕೆರೆ ನೀರನ್ನು ಯಂತ್ರಗಳ ಮೂಲಕ ಹೊರ ಹಾಕುತ್ತಿದ್ದಾರೆ. ಸತತ ಮೂರು ದಿನಗಳಿಂದ ನೀರನ್ನು ಹೊರ ಹಾಕುತ್ತಿದ್ದರು ಕೆರೆ ಮಾತ್ರ ಖಾಲಿ ಆಗ್ತಿಲ್ಲ.
ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಲ್ಲಿಗೆವಾಡ ಗ್ರಾ.ಪಂ ವ್ಯಾಪ್ತಿಯ ಉಮಚಗಿ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು, 3,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇದೇ ತಿಂಗಳು ಮೊದಲ ವಾರದಲ್ಲಿ ಸಾಲಬಾಧೆ ತಾಳಲಾರದೆ ಶಂಕರಪ್ಪ ಹುರಳಿ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನಗಳ ನಂತರ ಕೆರೆಯಲ್ಲಿ ಶಂಕರಪ್ಪನ ಶವ ತೇಲಿತ್ತು. ಕೊಳೆತ ಮತ್ತು ಮೀನುಗಳು ತಿಂದ ಸ್ಥಿತಿಯಲ್ಲಿ ಶವ ಸಿಕ್ಕಿತ್ತು. ಇದರಿಂದಾಗಿ ನೀರು ಕಲುಷಿತಗೊಂಡಿದೆ ಎಂದು ಜನ ವಾದಿಸುತ್ತಿದ್ದಾರೆ. ಇನ್ನೂ ಕೆಲವರು ಕೆರೆ ಮೈಲಿಗೆ ಆಗಿದೆ ಅಂತ ನೀರು ಖಾಲಿ ಮಾಡಿಸುವಂತೆ ಗ್ರಾಮ ಪಂಚಾಯತ್‍ಗೆ ಒತ್ತಾಯ ಮಾಡಿದ್ದರು. ಇದನ್ನೂ ಓದಿ: 1 ಲಕ್ಷದ ಮೊಬೈಲ್‍ಗಾಗಿ ಡ್ಯಾಂನ 21 ಲಕ್ಷ ಲೀ. ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿ!
ಜನರ ಮನವಿಗೆ ಮೊದಲು ಒಪ್ಪದ ಅಧಿಕಾರಿಗಳು ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೀರು ಕಲುಷಿತಗೊಂಡಿಲ್ಲ ಅಂತ ಮಾಹಿತಿ ನೀಡಿದ್ರು. ಆದ್ರ್ರೂ ಜನ ಕೇಳ್ತಿಲ್ಲ. ಕೆರೆ ನೀರನ್ನು ಖಾಲಿ ಮಾಡಿಸುವಂತೆ ಪಟ್ಟು ಹಿಡಿದಿದ್ದಾರೆ. ಗ್ರಾಮಸ್ಥರ ತೀವ್ರ ಒತ್ತಾಯಕ್ಕೆ ಮಣಿದ ಪಂಚಾಯಿತಿ ಅಧಿಕಾರಿಗಳು ಯಂತ್ರಗಳ ಮೂಲಕ ಹಗಲು – ರಾತ್ರಿ ನೀರು ಹೊರ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಐದಾರು ದಿನಗಳಲ್ಲಿ ಕೆರೆ ಸಂಪೂರ್ಣ ಖಾಲಿಯಾಗೋ ನಿರೀಕ್ಷೆಯಿತ್ತು. ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಇರುವ ಕಾರಣ ಕೆರೆ ಸದ್ಯಕ್ಕೆ ಖಾಲಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಆದ್ರೆ ನೀರು ಖಾಲಿ ಮಾಡಿಸಲೇ ಬೇಕೆಂದು ಗ್ರಾಮಸ್ಥರು ಹಠಕ್ಕೆ ಬಿದ್ದಿದ್ದಾರೆ.
ಲಕ್ಷಾಂತರ ರೂಪಾಯಿ ವ್ಯಯಿಸಿ ನೀರು ಹೊರ ಹಾಕ್ತಿರೋದಾಗಿ ಗ್ರಾ.ಪಂ. ಸಿಬ್ಬಂದಿ ಕೈ ತೊಳೆದು ಕೊಂಡಿದೆ. ಇನ್ನೂ ಚೆನ್ನಾಗಿರುವ ಕೆರೆ ನೀರು ಬಿಟ್ಟು ಅನಿವಾರ್ಯವಾಗಿ ಜನ ಐದಾರು ಕಿಲೋಮೀಟರ್ ಗಟ್ಟಲೆ ತೆರಳಿ ಫಿಲ್ಟರ್ ನೀರು ತರುವಂತಾಗಿದೆ.