ತುಮಕೂರು: ಆರೋಪಿಯ ಕೊಲೆ ಬೆದರಿಕೆಗೆ ಹೆದರಿದ ಸಾಕ್ಷಿದಾರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ತಾಲೂಕು ರಾಯವಾರ ಗ್ರಾಮದಲ್ಲಿ ನಡೆದಿದೆ.
ರಾಯವಾರ ಗ್ರಾಮದ ಜಯಣ್ಣ ಮೃತ ದುರ್ದೈವಿ. ಜಯಣ್ಣ ಡಿಸೆಂಬರ್ 21ರಂದು ಆರೋಪಿ ಕೆಂಪೇಗೌಡನ ವಿರುದ್ಧ ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ್ದ. ಬಳಿಕ ಕೆಂಪೇಗೌಡ ಒಡ್ಡಿದ್ದ ಕೊಲೆ ಬೆದರಿಕೆಯಿಂದ ಹೆದರಿ ಜಯಣ್ಣ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತು ಮೃತ ಜಯಣ್ಣನ ತಾಯಿ ಗಂಗಮ್ಮ ಅವರು ಹೆಬ್ಬೂರು ಪೊಲೀಸ್ ಠಾಣೆಗೆ ಕೆಂಪೇಗೌಡ, ಸಹಚರರಾದ ಶಾಂತರಾಜು, ಪ್ರಸನ್ನ, ಜಯಮ್ಮಾ, ಪಾರ್ವತಿ, ಮಧುರಾ, ಕರಿಯಪ್ಪ, ನಾಗರಾಜು ವಿರುದ್ಧ ದೂರು ನೀಡಿದ್ದಾರೆ.
Advertisement
Advertisement
ಏನಿದು ಪ್ರಕರಣ?:
2016ರಲ್ಲಿ ರಾಯವಾರದ ಆರೋಪಿ ಕೆಂಪೇಗೌಡ ಅದೇ ಗ್ರಾಮದ ಬಸವರಾಜು ಅವರ ಜೊತೆಗೆ ಜಗಳವಾಡಿದ್ದ. ಈ ವೇಳೆ ಅಸಭ್ಯವಾಗಿ ಮಾತನಾಡಿ ಜಾತಿ ನಿಂದನೆ ಮಾಡಿದ್ದ. ಈ ಕುರಿತು ಬಸವರಾಜು ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಪ್ರಮುಖ ಸಾಕ್ಷಿಯಾಗಿದ್ದ ಬಸವರಾಜು ಪುತ್ರ ಜಯಣ್ಣನಿಗೆ ಕೋರ್ಟ್ ನಲ್ಲಿ ಸಾಕ್ಷಿ ಹೇಳದಂತೆ ಕೆಂಪೇಗೌಡ ಹಾಗೂ ಆತನ ಸಹಚರರು ಬೆದರಿಕೆ ಹಾಕಿದ್ದರು.
Advertisement
ಇದೇ ವರ್ಷ ನವೆಂಬರ್ ತಿಂಗಳಲ್ಲಿ ಜಯಣ್ಣನನ್ನು ಕೆಂಪೇಗೌಡ ತೋಟದ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದರು. ಒಂದು ವೇಳೆ ಸಾಕ್ಷಿ ಹೇಳಿದರೆ ಮನೆಯವರನ್ನು ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆದರೂ ಡಿಸೆಂಬರ್ 21 ರಂದು ಕೋರ್ಟ್ ನಲ್ಲಿ ಜಯಣ್ಣ ಸಾಕ್ಷಿ ಹೇಳಿದ್ದ. ಇದರಿಂದ ಕೋಪಗೊಂಡ ಕೆಂಪೇಗೌಡ ಹಾಗೂ ಸಹಚರರು ಮನೆಗೆ ನುಗ್ಗಿ ಕೊಲೆ ಬೆದರಿಕೆಗೆ ಹಾಕಿದ್ದಾರೆ. ಇದರಿಂದ ಭಯಗೊಂಡ ಜಯಣ್ಣ ನೇಣಿಗೆ ಶರಣಾಗಿದ್ದಾನೆ.
Advertisement
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಬ್ಬೂರು ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಕೆಂಪೇಗೌಡ ಅವರ ಸಹಚರರಾದ ಶಾಂತರಾಜು, ಪ್ರಸನ್ನ ಸೇರಿದಂತೆ 8 ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಜಯಣ್ಣನ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಪೊಲೀಸರು ಸಾಗಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv