ಬೆಂಗಳೂರು: ಪತ್ನಿಯ ಕಿರುಕುಳ ತಾಳಲಾರದೆ ಪತಿಯೊಬ್ಬ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಾಗಲಗುಂಟೆಯಲ್ಲಿ ನಡೆದಿದೆ.
ಬಾಗಲಗುಂಟೆಯ ನಿವಾಸಿ ಶ್ರೀನಿವಾಸ್ ಎಸ್ (34) ಆತ್ಮಹತ್ಯೆಗೆ ಶರಣಾದ ಪತಿ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ಸುಮಾ ಜೊತೆಗೆ ಮದುವೆಯಾಗಿದ್ದರು. ಶ್ರೀನಿವಾಸ್ ಹಾಗೂ ಅಣ್ಣ ರವೀಶ್ವರ್ ಒಂದೇ ಮನೆಯಲ್ಲಿದ್ದರು. ಆದರೆ ಸುಮಾ ಬೇರೆ ಮನೆ ಮಾಡುವಂತೆ ಒತ್ತಾಯಿಸುತ್ತಿದ್ದಳು. ಅಷ್ಟೇ ಅಲ್ಲದೆ ಕೆಲಸದಿಂದ ಬರುವುದು ತಡವಾದರೆ ಫೋನ್ ಮಾಡಿ ಬೈಯ್ಯುತ್ತಿದ್ದಳು.
ಸುಮಾಗೆ ಆಕೆಯ ತಂದೆ ಗಂಗಣ್ಣ, ತಾಯಿ ಶಾರದಾ ಮತ್ತು ಅಣ್ಣ ಸುನೀಲ್ ಕುಮಾರ್ ಕುಮ್ಮಕ್ಕು ನೀಡುತ್ತಿದ್ದರು. ಸುಮಾ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ಪದೇ ಪದೇ ತವರಿಗೆ ಹೋಗುತ್ತಿದ್ದಳು. ಸುಮಾ ಒಂದೂವರೆ ತಿಂಗಳ ಹಿಂದೆ ಜಗಳವಾಡಿ ತವರು ಸೇರಿದ್ದಳು. ಈ ವಿಚಾರವಾಗಿ ಶ್ರೀನಿವಾಸ್ ಅಣ್ಣ ರವೀಶ್ವರ್ ಬಳಿ ಹೇಳಿಕೊಂಡಿದ್ದ.
ರವೀಶ್ವರ್ ಕುಟುಂಬದ ಸಮೇತ ಶುಕ್ರವಾರ ದೇವಸ್ಥಾನಕ್ಕೆ ಹೊರಟಿದ್ದರು, ಶ್ರೀನಿವಾಸ್‍ಗೂ ಬರುವಂತೆ ತಿಳಿಸಿದ್ದರು. ಆದರೆ ಶ್ರೀನಿವಾಸ್ ಪತ್ನಿಯ ಮನೆಯವರು ಜಗಳ ಮಾಡುತ್ತಾರೆ. ನಾನು ಬರುವುದಿಲ್ಲ ಎಂದು ಹೇಳಿ ಮನೆಯಲ್ಲಿಯೇ ಉಳಿದುಕೊಂಡಿದ್ದ. ಎರಡು ದಿನದ ಬಳಿಕ ಬಂದು ನೋಡಿದಾಗ ಶ್ರೀನಿವಾಸ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಪತ್ನಿ ಹಾಗೂ ಆಕೆಯ ಮನೆಯವರ ಕಿರುಕುಳವೇ ನನ್ನ ಸಾವಿಗೆ ಎಂದು ಶ್ರೀನಿವಾಸ್ ಡೆತ್ ನೋಟ್ ಬರೆದಿಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ರೀನಿವಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.