ಬೆಂಗಳೂರು: ಇಂದು ಕರ್ನಾಟಕದ ಹೆಮ್ಮೆ, ಕನ್ನಡ ಚಿತ್ರರಂಗ ಕಂಡ ಧೀಮಂತ ನಟ ವರನಟ ಡಾ. ರಾಜ್‍ಕುಮಾರ್ ಅವರ 91ನೇ ವರ್ಷದ ಹುಟ್ಟುಹಬ್ಬ. ಅವರು ನಮ್ಮನ್ನು ಅಗಲಿ ದಶಕಗಳೇ ಉರುಳಿ ಹೋದರೂ ಅವರ ಸಿನಿಮಾಗಳು ಅದೆಷ್ಟೋ ಜನರ ಇಂದಿಗೂ ಜೀವಕ್ಕೆ ಸ್ಪೂರ್ತಿ ನೀಡಿದೆ. ಆದ್ದರಿಂದಲೇ ಕರುನಾಡಲ್ಲಿ ಡಾ. ರಾಜ್‍ಕುಮಾರ್ ಅವರನ್ನ ಅಣ್ಣಾವ್ರು ಎಂದು ಇಂದಿಗೂ ಜನ ನೆನೆಯುತ್ತಾರೆ. ಅವರು ಇಲ್ಲದಿದ್ದರೂ ಅವರ ಸಿನಿಮಾಗಳು, ಅದರಲ್ಲಿದ್ದ ಸಂದೇಶಗಳು ಇಂದಿಗೂ ಚಿರಸ್ಮರಣೀಯ.
ಡಾ. ರಾಜ್ ಕುಮಾರ್ ಅವರ ಸಾಧನೆಗಳನ್ನು ಮೆಲುಕು ಹಾಕುತ್ತಾ ಹೋದರೆ ಪುಟಗಳೇ ಸಾಲದು. ಅಷ್ಟರ ಮಟ್ಟಿಗೆ ಕರುನಾಡಲ್ಲಿ ರಾಜ್‍ಕುಮಾರ್ ಅವರು ಖ್ಯಾತಿ, ಪ್ರೀತಿಯನ್ನು ಗಳಿಸಿದ್ದಾರೆ. ರಾಜ್‍ಕುಮಾರ್ ಅವರ ಮೊದಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಇವರ 1929ರ ಏಪ್ರಿಲ್ 24ರಂದು ಗಾಜನೂರಿನಲ್ಲಿ ಜನಿಸಿದರು. ಗುಬ್ಬಿ ವೀರಣ್ಣ ಗರಡಿಯಲ್ಲಿ ಪಳಗಿದ ಪ್ರತಿಭೆಯಾಗಿದ್ದು, ನಾಟಕ, ಅಭಿನಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು ಗುಬ್ಬಿ ನಾಟಕ ಕಂಪನಿಯಲ್ಲಿ ನಾಟಕಗಳನ್ನು ಮಾಡುತ್ತಿದ್ದರು.
Advertisement
Advertisement
ಬಳಿಕ 1954ರಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಪಯಣ ಆರಂಭಿಸಿದ ಮುತ್ತುರಾಜ್, ರಾಜ್‍ಕುಮಾರ್ ಆಗಿ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದರು. ಸುಮಾರು 206 ಚಿತ್ರಗಳಲ್ಲಿ ಅಭಿನಯಿಸಿದ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮನಾಗಿ ವರನಟರಾದರು. ಆದರೆ ಕನ್ನಡದ ಪ್ರೀತಿಯ ಅಭಿಮಾನಿಗಳ ಪಾಲಿಗೆ ಅಣ್ಣಾವ್ರು ಆಗಿ ಸಾಧನೆಯ ಶಿಖರ ಏರಿದರು. 2000ರಲ್ಲಿ ತೆರೆಕಂಡ ಶಬ್ದವೇದಿ ಚಿತ್ರ ಅವರ ಸಿನಿ ಬದುಕಿನ ಕೊನೆಯ ಚಿತ್ರವಾಗಿದ್ದು, ಇಂದು ನಮ್ಮೊಂದಿಗೆ ಅಣ್ಣಾವ್ರು ಇಲ್ಲದಿದ್ದರೂ, ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಇಂದಿಗೂ ಜೀವಂತವಾಗಿದೆ.
Advertisement
ಡಾ. ರಾಜ್ ಪ್ರತಿಭೆಗೆ ಒಲಿದ ಪ್ರಶಸ್ತಿಗಳು:
ಪದ್ಮಭೂಷಣ, ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಕೆಂಟಕಿ ಕರ್ನಲ್(1985ರಲ್ಲಿ ಅಮೆರಿಕ ಕೆಂಟಕಿ ರಾಜ್ಯದ ರಾಜ್ಯಪಾಲರು ಡಾ. ರಾಜ್‍ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದರು), ನಾಡೋಜ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕಲಾ ಕೌಸ್ತುಭ ಪ್ರಶಸ್ತಿ ಸೇರಿದಂತೆ 10 ಬಾರಿ ಅತ್ಯುತ್ತಮ ನಟ ಫಿಲ್ಮ್‍ಫೇರ್ ಪ್ರಶಸ್ತಿ, 9 ಬಾರಿ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗಳನ್ನು ರಾಜ್‍ಕುಮಾರ್ ಅವರು ತಮ್ಮದಾಗಿಸಿಕೊಂಡಿದ್ದಾರೆ.
Advertisement
ಪಡೆದ ಪದವಿ, ಬಿರುದುಗಳು:
ಮೈಸೂರು ವಿಶ್ವವಿದ್ಯಾಲಯವು ರಾಜ್‍ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 100ನೇ ಚಿತ್ರದ ಸಂದರ್ಭದಲ್ಲಿ ನಟಸಾರ್ವಭೌಮ ಬಿರುದು ಅವರ ಪ್ರತಿಭೆಗೆ ಒಲಿದು ಬಂತು. ಹಾಗೆಯೇ ಗಾನಗಂಧರ್ವ, ವರನಟ, ಅಣ್ಣಾವ್ರು, ರಸಿಕರ ರಾಜ, ಕನ್ನಡದ ಕಣ್ಮಣಿ, ಮೇರು ನಟ ಎಂದು ಅಭಿಮಾನಿಗಳು, ಪತ್ರಕರ್ತರು ಸೇರಿ ರಾಜ್‍ಕುಮಾರ್ ಅವರಿಗೆ ಬಿರುದು ಕೊಟ್ಟರು.
ಅಷ್ಟೇ ಅಲ್ಲದೇ ಬೆಂಗಳೂರಿನ ರಸ್ತೆಯೊಂದಕ್ಕೆ ಡಾ. ರಾಜ್‍ಕುಮಾರ್ ರಸ್ತೆ ಎಂದೇ ಹೆಸರಿಡಲಾಗಿದೆ. ಯಶವಂತಪುರ ಮೇಲ್ಸೆತುವೆಯಿಂದ ಪ್ರಸನ್ನ ಚಿತ್ರಮಂದಿರದವರೆಗೆ ರಾಜಾಜಿನಗರದ ಮೂಲಕ ಹಾದುಹೋಗುವ ಮುಖ್ಯರಸ್ತೆಗೆ ಡಾ. ರಾಜ್‍ಕುಮಾರ್ ರಸ್ತೆ ಎಂದು ಹೆಸರಿಡಲಾಗಿದೆ.
ಮೂರು ತಲೆಮಾರು ಮೆಚ್ಚಿದ ಸಿನಿಮಾಗಳು:
ಬೇಡರ ಕಣ್ಣಪ್ಪ(1954), ರಣಧೀರ ಕಂಠೀರವ(1960), ಸತ್ಯ ಹರಿಶ್ಚಂದ್ರ(1965), ಚಂದ್ರಹಾಸ(1965), ಕಸ್ತೂರಿ ನಿವಾಸ(1971), ಬಂಗಾರದ ಮನುಷ್ಯ(1972), ಭಕ್ತ ಕುಂಬಾರ(1974), ನಾ ನಿನ್ನ ಮರೆಯಲಾರೆ(1976), ಭಾಗ್ಯವಂತರು(1977), ಕವಿರತ್ನ ಕಾಳಿದಾಸ(1983).
ಕಾದಂಬರಿ ಆಧಾರಿತ ಸಿನಿಮಾಗಳು:
ಕರುಣೆಯೇ ಕುಟುಂಬದ ಕಣ್ಣು (1962), ಭೂದಾನ (1962), ಕುಲವಧು (1963), ಚಂದವಳ್ಳಿಯ ತೋಟ (1964), ಸಂಧ್ಯಾ ರಾಗ (1966), ಚಕ್ರತೀರ್ಥ (1967), ಸರ್ವಮಂಗಳಾ (1968), ಹಣ್ಣೆಲೆ ಚಿಗುರಿದಾಗ (1968), ಉಯ್ಯಾಲೆ (1969), ಮಾರ್ಗದರ್ಶಿ (1969), ಪುನರ್ಜನ್ಮ (1969), ಸಿಪಾಯಿ ರಾಮು (1972), ಬಂಗಾರದ ಮನುಷ್ಯ (1972), ಎರಡು ಕನಸು (1974), ಮಯೂರ (1975), ಗಿರಿ ಕನ್ಯೆ (1977), ಸನಾದಿ ಅಪ್ಪಣ್ಣ (1977), ಹುಲಿಯ ಹಾಲಿನ ಮೇವು (1979), ಹೊಸ ಬೆಳಕು (1982), ಕಾಮನ ಬಿಲ್ಲು (1984), ಸಮಯದ ಗೊಂಬೆ (1984), ಧ್ರುವತಾರೆ (1985), ಜ್ವಾಲಾಮುಖಿ (1985), ಅನುರಾಗ ಅರಳಿತು (1986), ಶ್ರುತಿ ಸೇರಿದಾಗ (1987), ಜೀವನ ಚೈತ್ರ (1992), ಆಕಸ್ಮಿಕ (1993), ಶಬ್ಧವೇಧಿ (2000)