ಚಾಮರಾಜನಗರ: ಕೊಟ್ಟಿಗೆಗೆ ನುಗ್ಗಿ ಕರುವನ್ನು ಚಿರತೆ ಕೊಂದು ತಿಂದಿರುವ ಘಟನೆ ಚಾಮರಾಜನಗರ ತಾಲ್ಲೂಕು ಮಹಂತಾಳಪುರದಲ್ಲಿ ನಡೆದಿದೆ. ಜನರಲ್ಲಿ ಚಿರತೆ ಆತಂಕ ಮೂಡಿದೆ.
ಗ್ರಾಮದ ಮಧ್ಯಭಾಗದಲ್ಲಿರುವ ಕೊಟ್ಟಿಗೆಗೆ ನುಗ್ಗಿ ಕರುವನ್ನು ಚಿರತೆ ಕೊಂದಿದೆ. ಕಮಲಮ್ಮ ಎಂಬವರಿಗೆ ಸೇರಿದ ಕರು ಇದಾಗಿತ್ತು. ಕೆಲ ದಿನಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಮೇಯುತ್ತಿದ್ದಾಗ ಎರಡು ಕುರಿಮರಿಗಳನ್ನು ಚಿರತೆ ಕೊಂದು ಹಾಕಿತ್ತು.
ಇದೀಗ ಗ್ರಾಮಕ್ಕೇ ನುಗ್ಗಿ ಕರು ತಿಂದಿದೆ. ಗ್ರಾಮಸ್ಥರಲ್ಲಿ ಚಿರತೆ ಆತಂಕ ಮನೆ ಮಾಡಿದೆ. ಚಿರತೆ ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಕೊನೆಗೆ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅರಣ್ಯ ಸಿಬ್ಬಂದಿಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ವಾರಿಯಿಂದ ಇಲ್ಲಿಗೆ ಬಂದಿದೆ ಅಂತೀರಾ? ಚಿರತೆ ಸೆರೆಹಿಡಿಯದೆ ಏನ್ ಮಾಡ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.