ಚಿಕ್ಕಬಳ್ಳಾಪುರ: ಅದು ಆಹಾರ ಹರಸಿ ಕಗ್ಗತ್ತಲ ರಾತ್ರಿಯಲ್ಲಿ ಕಾಡಿನಲ್ಲಿ ಒಡಾಡ್ತಿತ್ತು, ಆದ್ರೆ ಮನುಷ್ಯರ ದುರಾಸೆ ಎಂಬಂತೆ ಕಾಡು ಹಂದಿ ಸೆರೆಗೆ ಅಂತ ಹಾಕಲಾಗಿದ್ದ ಉರುಳಿಗೆ ಸಿಕ್ಕ ಚಿರತೆ (Leopard) ಇಡೀ ದಿನ ನೀರು ಸಿಗದೇ ಒದ್ದಾಡಿ ಪ್ರಾಣಬಿಟ್ಟಿದೆ. ಇದ್ರಿಂದ ಅರಣ್ಯಾಧಿಕಾರಿಗಳು ಮೃತ ಚಿರತೆಗೆ ಅಗ್ನಿಸ್ಪರ್ಧ ಮಾಡಿ ಅಂತಿಮ ವಿಧಿ ವಿಧಾನದ ನೆರವೇರಿಸಿದ್ದಾರೆ.
ಪಾಪಿ ಮಾನವರ ಅಟ್ಟಹಾಸಕ್ಕೆ ಬೆಂಕಿಯಲ್ಲಿ ಬೆಂದು ಹೋಗ್ತಿರೋ ಚಿರತೆ, ತಾನಾಯ್ತು ತನ್ನ ಪಾಡಾಯ್ತು ಅಂತ ಕಾಡಲ್ಲಿ ರಾಜನಂತೆ ಮೆರದಾಡುತ್ತಿದ್ದ ಈ ಚಿರತೆ, ಆಹಾರ ಹರಿಸಿ ಕಗ್ಗತ್ತಲ ಕಾಡಿನಲ್ಲಿ ಅಲೆದಾಡುತ್ತಿತ್ತು. ಆದ್ರೆ ಕಾಡು ಹಂದಿಯನ್ನ ಬಲೆಗೆ ಕೆಡವೋಕೆ ಅಂತ ಪಾಪಿಗಳು ಹಾಕಿದ್ದ ಉರುಳಿಗೆ ಚಿರತೆ ತಗಲಾಕ್ಕೊಂಡಿದೆ. ಇದ್ರಿಂದ ಉರುಳಿನಿಂದ ತಪ್ಪಿಸಿಕೊಳ್ಳೋಕೆ ಪಡಬಾರದ ಕಷ್ಟ ಪಟ್ಟಿದೆ. ಆದ್ರೆ ಉರುಳು ಮತ್ತಷ್ಟು ಬಿಗಿಯಾಗಿ ಹೊಟ್ಟೆಯನ್ನ ಬಿಗಿದು ಹಾಕಿದೆ. ಇಡೀ ರಾತ್ರಿ ಚಳಿಯ ನಡುವೆ ಗಢಗಢ ನಡುಗಿ ಚಿರತೆ ಪ್ರಾಣ ಉಳಿಸಿಕೊಳ್ಳೋಕೆ ಶಕ್ತಿ ಮೀರಿ ಪ್ರಯತ್ನ ಮಾಡಿದೆ. ಆದ್ರೆ ಚಿರತೆಯ ಪ್ರಯತ್ನ ವಿಫಲವಾಗಿ ಕೊನೆಗೆ ಜೀವಬಿಟ್ಟಿದೆ. ಅಂದಹಾಗೆ ಇಂತಹ ಮನಕಲಕುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಗೊಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಸರಿ ಸುಮಾರು 3-4 ವರ್ಷದ ಹೆಣ್ಣು ಚಿರತೆ ಪ್ರಾಣ ಕಳೆದುಕೊಂಡಿದೆ.
ಕಾಡು ಹಂದಿ ಸೆರೆಗೆ ಹಾಕಿದ್ದ ಉರುಳಿನಲ್ಲಿ ಬಂಧಿಯಾಗಿದ್ದ ಚಿರತೆ ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ರು.. ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ವೈದ್ಯಾಧಿಕಾರಿಗಳನ್ನ ಕರೆಸಿ ಉಸಿರಾಡುತ್ತಿದ್ದ ಚಿರತೆಯನ್ನ ಉಳಿಸೋಕೆ ವೈದ್ಯ ಆನಂದ್ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದ್ರೆ ದುರಾದೃಷ್ಟವಶಾತ್ ಚಿರತೆ 10-15 ನಿಮಿಷದಲ್ಲೇ ಉಸಿರು ಚೆಲ್ಲಿದೆ. ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಚಿರತೆ ಉರುಳಿನಲ್ಲಿ ಸಿಲಿಕಿದ ಪರಿಣಾಮ ವಿಲವಿಲ ಒದ್ದಾಡಿ ನರಳಾಡಿದೆ. ನೀರು ಸಿಗದೆ ಡಿಹೈಡ್ರೇಷನ್ ಆಗಿದೆ. ಪ್ರಾಣ ಉಳಿಸಿಕೊಳ್ಳುವ ಭರದಲ್ಲಿ ಶಾಕ್‌ಗೆ ಒಳಗಾಗಿ ಅದರ ರಕ್ತನಾಳಗಳೆಲ್ಲವೂ ಬ್ಲಾಕ್ ಆಗಿ ಸಾವನ್ನಪ್ಪಿದೆ ಎನ್ನಲಾಗಿದೆ. ಅರಣ್ಯ ಸಿಬ್ಬಂದಿ ಚಿರತೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಚಿರತೆ ಜೀವ ಉಳಿಸಲು ಪ್ರಯತ್ನಪಟ್ರೂ ಸಾಧ್ಯವಾಗಿಲ್ಲ, ಹೀಗಾಗಿ ಕಾಡು ಹಂದಿ ಬೇಟೆಗೆ ಹುರುಳು ಹಾಕಿದವರನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳೋಕೆ ಅರಣ್ಯ ಇಲಾಖೆ ಮುಂದಾಗಿದೆ.



