ಕಾಸರಗೋಡು: ಪ್ರೀತಿ ಮಾಯೆ ಹುಷಾರು.. ಪ್ರೀತಿಗೆ ಕಣ್ಣಿಲ್ಲ ಅಂತೆಲ್ಲಾ ಹೇಳ್ತಾರೆ. ಅಂಥದ್ದೇ ಒಂದು ಕಥೆ ಇದು. ಈ ಘಟನೆ ನಡೆದಿದ್ದು ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ.
ನೀಲೇಶ್ವರ ಎಂಬಲ್ಲಿಯ ಈ ಯುವತಿ ಹೋಮಿಯೋಪತಿ ಡಾಕ್ಟರ್ ಆಗಿದ್ದು ಆಕೆಗೆ ಎಂಜಿನಿಯರ್ ಒಬ್ಬನ ಜೊತೆ 2 ತಿಂಗಳ ಹಿಂದೆ ಆಡಂಬರಯುತ, ಅದ್ಧೂರಿ ವಿವಾಹ ನಿಶ್ಚಿತಾರ್ಥ ನಡೆದಿತ್ತು. ನೀಲೇಶ್ವರದಲ್ಲಿರುವ ಪ್ರಮುಖ ಹೋಟೆಲೊಂದರಲ್ಲಿ ಈ ಶುಭ ಕಾರ್ಯ ನಡೆದಿತ್ತು. ಆದರೆ ಎಂಗೇಜ್ಮೆಂಟ್ ಆಗಿ ಕೆಲವೇ ದಿನಗಳಲ್ಲಿ ಈ ಡಾಕ್ಟರ್ ಎಂಜಿನಿಯರ್ ನನಗೆ ಬೇಡ ಎಂದು ಮದುವೆಗೆ ಹಿಂದೇಟು ಹಾಕಿದ್ದಾಳೆ.
ಲವ್ವಿ ಡವ್ವಿ ಬಸ್ಸಲ್ಲೇ ನಡೆದಿತ್ತು!: ಕೇರಳದ ಇರಿಟ್ಟಿ ಎಂಬಲ್ಲಿ ವೈದ್ಯೆಯಾಗಿರುವ ಆಕೆ ನಿತ್ಯ ಕೆಲಸಕ್ಕೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಈಕೆಗೆ ಬಸ್ ನಲ್ಲಿ ಕಂಡಕ್ಟರ್ ಪರಿಚಯವಾಗಿದೆ. ಪರಿಚಯ ಮತ್ತೂ ಮುಂದುವರಿದು ಪ್ರೇಮಾಂಕುರವಾಗಿದೆ. ಈತನ ಜೊತೆಯೇ ನನಗೆ ಮದುವೆ ಮಾಡಿಕೊಡಿ ಎಂದು ಆಕೆ ಅಂಗಾಲಾಚಿದರೂ ಸಂಬಂಧಿಕರು ಹಾಗೂ ಪೋಷಕರು ಕೇಳಲೇ ಇಲ್ಲ. ಇದಾದ ಬಳಿಕ ದಿಢೀರ್ ಆಗಿ ವೈದ್ಯೆ ನಾಪತ್ತೆಯಾಗಿದ್ದಳು. ಸುಮಾರು ದಿನ ಕಳೆದರೂ ಯಾವುದೇ ಸುಳಿವೂ ಸಿಕ್ಕಿರಲಿಲ್ಲ. ಜೊತೆಗೆ ಆಕೆಯ ಮೊಬೈಲ್ ಫೋನ್ ಗೆ ಕರೆ ಮಾಡಿದರೆ ಅದು ಕೂಡಾ ಸ್ವಿಚ್ ಆಫ್ ಆಗಿತ್ತು.
ಆದರೆ ಎರಡು ದಿನಗಳ ಹಿಂದೆ ವೈದ್ಯೆ ಹಾಗೂ ಬಸ್ ಕಂಡಕ್ಟರ್ ದೇವಸ್ಥಾನವೊಂದರಲ್ಲಿ ಮದುವೆಯಾಗಿರುವ ಫೋಟೋಗಳು ವಾಟ್ಸಪ್ ಮೂಲಕ ಸಂಬಂಧಿಕರಿಗೆ ತಲುಪಿದೆ. ಈ ಮೂಲಕ ಇಬ್ಬರ ಕಂಡಕ್ಟರ್ ಡಾಕ್ಟರನ್ನು ಸೇರಿದ ವಿಚಾರ ಎಲ್ಲರಿಗೂ ಗೊತ್ತಾಗಿದೆ.