ಉಡುಪಿ: ಮಂಗಳಮುಖಿಯರು ಕುಟುಂಬದಿಂದ ಪ್ರೀತಿ ಸಿಗದೆ ಹೊರ ಬಂದವರು. ಸಮಾಜದಿಂದ ದೂರಾಗಿಸಲ್ಪಟ್ಟವರು. ಮಾತಿನಲ್ಲಿ ಎಲ್ಲರೂ ಕಾಳಜಿ ತೋರಿದರೂ ನಿಜಾರ್ಥದಲ್ಲಿ ಸಹಾಯ ಸಿಗದವರು. ಬರೀ ನೋವಿನಲ್ಲೇ ನಗುವನ್ನು ಹುಡುಕುವ ತೃತೀಯ ಲಿಂಗಿಗಳಿಗೆ ಪವಿತ್ರ ಗಂಗಾರತಿ ಮಾಡುವ ಅವಕಾಶ ಸಿಕ್ಕಿತು. ಈ ಮೂಲಕ ಬಹು ನಿರೀಕ್ಷಿತ ಪುಸ್ತಕ ನಾನು ಸನ್ಯಾಸಿಯಾಗಲು ಹೊರಟಿದ್ದೆ ಬಿಡುಗಡೆಗೊಳಿಸಲಾಯ್ತು.
ಉಡುಪಿಯ ಸುವರ್ಣ ನದಿಯ ತಟದಲ್ಲಿ ಸಾವಿರ ಸಾವಿರ ದೀಪಗಳ ಸಾಲು. ಹುಣ್ಣಿಮೆ ರಾತ್ರಿಯಲ್ಲಿ ಮನಸ್ಸು ತಣಿಸೋ ಸಂಗೀತದ ಸಾಲು. ತಣ್ಣನೆ ಹರಿವ ನದಿಗೆ ಮಂಗಳಮುಖಿಯರಿಂದ ಆರತಿ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಾಳದ ಕಡಾರಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸೊಬಗು ಇದು.
Advertisement
Advertisement
ಮಾಮೂಲಿ ಬುಕ್ ರಿಲೀಸ್ ಇದಾಗಿರದೆ ಬಂದ ನೂರಾರು ಜನ ಸುವರ್ಣ ನದಿ ಡ್ಯಾಂ ಮೇಲೆ ಸಾವಿರ ದೀಪ ಬೆಳಗಿದರು. ಅಷ್ಟರಲ್ಲಿ ತಂಬೂದಿ ಹಿಡಿದು ರಾಜ್ಯ ಸುತ್ತಿ ಜನರ ಮನಸ್ಸನ್ನು ಒಗ್ಗೂಡಿಸುವ ನಾದ ಮಣಿನಾಲ್ಕೂರು ಅವರ ಸಂಗೀತ ಆರಂಭವಾಯ್ತು. ಇತ್ತ ನದಿಯ ಜುಳು ಜುಳು ನಾದ, ಅತ್ತ ನಾದ ಮಣಿನಾಲ್ಕೂರರ ಪದ, ಆಗಸದಲ್ಲಿ ತಣ್ಣಗಿನ ಬೆಳಕು ಕೊಡುತ್ತಿದ್ದ ಚಂದಿರ.
Advertisement
ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಮಂಜುನಾಥ್ ಕಾಮತ್ ಅವರ ಮೂರನೇ ಕೃತಿ ನಾನು ಸನ್ಯಾಸಿಯಾಗಲು ಹೊರಟಿದ್ದೆ ರಿಲೀಸ್ ಆಯ್ತು. ಸುವರ್ಣ ನದಿಗೆ ಮಂಗಳಮುಖಿಯರಾದ ಕಾಜೊಲ್ ಮತ್ತು ನಗ್ಮಾ ಆರತಿ ಎತ್ತಿ ಪುಸ್ತಕವನ್ನು ಲೋಕಾರ್ಪಣೆಗೈದರು. ಮುಂಬೈಯಲ್ಲಿ ಡಾನ್ಸ್ ಬಾರಿನಲ್ಲಿ ನೃತ್ಯಗಾರ್ತಿಯರಾಗಿ ಕೆಲಸ ಮಾಡುತ್ತಿದ್ದ ಕಾಜೊಲ್ ಮತ್ತು ನಗ್ಮಾ ಸದ್ಯ ಉಡುಪಿಯಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಎಫ್ ಎಂ ಸ್ಟೇಷನ್ ನ್ಲಲಿ ನಿರೂಪಕಿಯಾಗಿ, ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.
Advertisement
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿತಾ ನಂದಕುಮಾರ್ ಮಾತನಾಡಿ, ಮಂಗಳಮುಖಿಯರ ಬಗ್ಗೆ ಎಲ್ಲರೂ ಮೃದು ಧೋರಣೆ ವಹಿಸುತ್ತಾರೆ. ಆದ್ರೆ ಸಹಾಯದ ವಿಚಾರಕ್ಕೆ ಬಂದರೆ ಕಡೆಗಣಿಸುವವರೇ ಜಾಸ್ತಿ. ಮಂಜುನಾಥ್ ಕಾಮತ್ ಸುವರ್ಣ ನದಿಗೆ ಗಂಗಾರತಿ ಮಾಡುವ, ಪುಸ್ತಕ ಬಿಡುಗಡೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿರುವುದು ನೋಡಿದಾಗ ಮನಸ್ಸು ತುಂಬಿ ಬಂದಿದೆ ಎಂದು ಹೇಳಿದರು.
ಕಾಮತ್ ಅವರ ನಾನು ಸನ್ಯಾಸಿಯಾಗಲು ಹೊರಟಿದ್ದೆ ಪುಸ್ತಕಕ್ಕೆ ಹೆಸರು ಫೈನಲ್ ಆದದ್ದು ಕಾಶಿಯಲ್ಲಿ. ಪುಸ್ತಕದ ಮುಖಪುಟ ಬಿಡುಗಡೆಯಾದದ್ದು ಉಡುಪಿ ಕೋಡಿಬೆಂಗ್ರೆಯ 40 ದ್ವೀಪಗಳ ಸಾಲಿನ ನಡುವೆ ದೋಣಿಯಲ್ಲಿ. ಈ ಹಿಂದಿನ ಕೃತಿ ದಾರಿ ತಪ್ಪಿಸು ದೇವರೇ ಚಲನಚಿತ್ರವಾಗುತ್ತಿದ್ದು, ಸಿದ್ಧತೆ ಹಂತದಲ್ಲಿದೆ. ಈ ನಡುವೆ ನಾನು ಸನ್ಯಾಸಿಯಾಗಲು ಹೊರಟಿದ್ದೆ ಪುಸ್ತಕದ ಹೆಸರು ಬಹಳ ಕ್ಯಾಚಿಯಾಗಿದ್ದು ನನ್ನ 10 ವರ್ಷದ ಜೀವನದ ಕಥೆಯನ್ನೇ ಮಂಜುನಾಥ್ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಆನ್ ಲೈನ್ ಮತ್ತು ಎಲ್ಲಾ ಪುಸ್ತಕದ ಅಂಗಡಿಗಳಲ್ಲಿ ನಾನು ಸನ್ಯಾಸಿಯಾಗಲು ಹೊರಟಿದ್ದೆ ಪುಸ್ತಕ ಲಭ್ಯವಿದೆ ಎಂದು ಮಂಜುನಾಥ್ ಕಾಮತ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದರು.
ಮಂಗಳಮುಖಿಯರಿಂದ ನದಿಗೆ ಗಂಗಾರತಿ, ಪುಸ್ತಕ ಬಿಡುಗಡೆ ಮಾಡಿಸಿ ಸಮಾಜದಲ್ಲಿ ಆ ವರ್ಗಕ್ಕೂ ಗೌರವ ಕೊಡಲಾಗಿದೆ. ನಾಲ್ಕು ಗೋಡೆಯ ಮಧ್ಯೆ ಪುಸ್ತಕ ರಿಲೀಸ್ ಮಾಡಿ, ಅದರ ವಿಮರ್ಶೆ ಮಾಡಿದ್ದರೆ ಇದೊಂದು ಮಾಮೂಲಿ ಕಾರ್ಯಕ್ರಮ ಆಗಿಬಿಡುತ್ತಿತ್ತು. ಆದ್ರೆ ನಾನು ಸನ್ಯಾಸಿಯಾಗಲು ಹೊರಟಿದ್ದೆ ತಿಂಗಳ ಬೆಳಕು ಕೃತಿ ನದಿಯ ಜುಳು ಜುಳು, ಕಿವಿಗಿಂಪಾದ ನಾದದ ನಡುವೆ ಸಾವಿರ ಹಣತೆ ದೀಪಗಳ ನಡುವೆ ವಿಭಿನ್ನವಾಗಿ ಬಿಡುಗಡೆಯಾಗಿ ಜನರನ್ನೂ ಆಕರ್ಷಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv