ಕೋಲಾರ: ಕಳ್ಳತನದ ಮಾಲು ವಶಪಡಿಸಿಕೊಳ್ಳಲು ಹೋದ ಸಿಪಿಐ ಗೆ ಜ್ಯುವೆಲ್ಲರಿ ಅಂಗಡಿ ಮಾಲೀಕ ಹಾಗೂ ಆತನ ಮಕ್ಕಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಜ್ಯುವೆಲ್ಲರಿ ಅಂಗಡಿ ಮಾಲೀಕ ಪ್ರಕಾಶ್ ಚಂದ್, ಮಕ್ಕಳಾದ ರಾಜೇಶ್ ಚಂದ್ ಹಾಗೂ ನಿತೀಶ್ ಚಂದ್ ಸಿಪಿಐಗೆ ಪ್ರಾಣ ಬೆದರಿಕೆ ಹಾಕಿದ ಆರೋಪಿಗಳು.
ಪ್ರಕಾಶ್ ಚಂದ್ ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನದ ಮಾಲು ವಶಪಡಿಸಿಕೊಳ್ಳಲು ತೆರಳಿದ್ದ ಬಂಗಾರಪೇಟೆ ಸಿಪಿಐ ದಿನೇಶ್ ಪಾಟೀಲ್ ಹಾಗೂ ತಂಡದ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೋಪಿ ಚಂದ್ರಪ್ಪ ನೀಡಿದ ಮಾಹಿತಿ ಮೇರೆಗೆ ಮಾಲು ವಶಕ್ಕೆ ಪಡೆಯಲು ತೆರಳಿದ್ದ ಸಂದರ್ಭದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ರಾಬರ್ಟ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಜ್ಯುವೆಲ್ಲರಿ ಶಾಪ್ ಮಾಲೀಕ ಪ್ರಕಾಶ್ ಚಂದ್ ಹಾಗು ಮೂವರು ಮಕ್ಕಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.