ಕಲಬುರಗಿ: ಪರ ವಿರೋಧದ ಮಧ್ಯೆ ಕಲಬುರಗಿಯಲ್ಲಿಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಬೃಹತ್ ರ‍್ಯಾಲಿ ನಡೆಸಲಾಗುತ್ತಿದೆ. ಈ ಮೂಲಕ ಬಸವ ತತ್ವದವರು ವೈಧಿಕ ಮಠಾಧೀಶರ ವಿರುದ್ಧ ಮತ್ತೆ ತಿರುಗಿ ಬಿದಿದ್ದಾರೆ. ಇನ್ನು ಈ ರ‍್ಯಾಲಿಯನ್ನು ಯಶಸ್ವಿ ಮಾಡಲು ಸಚಿವ ಎಂ.ಬಿ.ಪಾಟೀಲ್ ಸಂಪೂರ್ಣ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
ಗಡಿ ಜಿಲ್ಲೆ ಬೀದರ್‍ನಿಂದ ಆರಂಭವಾದ ಪ್ರತ್ಯೇಕ ಲಿಂಗಾಯತ ಧರ್ಮ ಚಳುವಳಿ ಇದೀಗ ಕಲಬುರಗಿಗೆ ಕಾಲಿಟ್ಟಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಇಂದು ನಗರದ ಎನ್‍ವಿ ಮೈದಾನದಲ್ಲಿ ಬೃಹತ್ ರ‍್ಯಾಲಿ ಆಯೋಜಿಸಲು ಸಕಲ ಸಿದ್ಧತೆ ನಡೆದಿದೆ. ರ‍್ಯಾಲಿ ಹಿನ್ನೆಲೆ ನಗರದ ಬಹುತೇಕ ರಸ್ತೆಗಳಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಬ್ಯಾನರ್ ಮತ್ತು ಕಟೌಟ್‍ಗಳು ರಾರಾಜಿಸುತ್ತಿವೆ.
ಲಿಂಗಾಯತ ಧರ್ಮಕ್ಕೆ ಕಟಿಬದ್ಧರಾಗಿರೋ ಸಚಿವ ಎಂ.ಬಿ.ಪಾಟೀಲ್ ರ‍್ಯಾಲಿಯ ಸಂಪೂರ್ಣ ಉಸ್ತುವಾರಿ ವಹಿಸಿದ್ದು, ಸಮಾವೇಶದ ಯಶ್ವಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರ‍್ಯಾಲಿ ನಡೆಯುವ ಎನ್‍ವಿ ಮೈದಾನಕ್ಕೆ ತೆರಳಿದ ಸಚಿವ ಎಂಬಿ ಪಾಟೀಲ್ ಎಲ್ಲಾ ಸಿದ್ಧತೆಗಳನ್ನು ತಾವೆ ಖುದ್ದಾಗಿ ನಿಂತು ಪರಿಶೀಲನೆ ನಡೆಸಿದ್ದಾರೆ.
ಈ ಬೃಹತ್ ಸಮಾವೇಶದಲ್ಲಿ ಲಿಂಗಾತ ಧರ್ಮ ಬೇಕೆಂದು ಪ್ರತಿಪಾದಿಸುವ ಸ್ವಾಮೀಜಿಗಳು, ಮಠಾಧೀಶರು, ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ. ಲಿಂಗಾಯತ ಸಮುದಾಯದ ಬರೋಬ್ಬರಿ 2 ಲಕ್ಷ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು ಪ್ರತ್ಯೇಕ ಧರ್ಮದ ಕಹಳೆ ಮೊಳಗಿಸಲಿದ್ದಾರೆ.
ಈ ಮಧ್ಯೆ ಲಿಂಗಾಯತ ರ‍್ಯಾಲಿಯಲ್ಲಿ ಯಾರು ಪಾಲ್ಗೊಳ್ಳಬಾರದು ಎಂದು ವೀರಶೈವ ಲಿಂಗಾಯತರು ಜಾಗೃತಿ ಮೂಡಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತ್ಯೇಕ ಧರ್ಮ ರ‍್ಯಾಲಿ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.