ಭೋಪಾಲ್: ಒಬ್ಬ ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎನ್ನುತ್ತ ಮಾಲೆಗಾಂವ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಅವರನ್ನು ಭೋಪಾಲ್‍ನಿಂದ ಕಣಕ್ಕಿಳಿಸಿರುವುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಛತ್ರಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ. ಸನಾತನ ಸಂಸ್ಕೃತಿ ಎಂದಿಗೂ, ಯಾರಿಗೂ ಹಾನಿ ಮಾಡಿಲ್ಲ. ಆದ್ರೆ ಕಾಂಗ್ರೆಸ್ ನಾಯಕರು ಹಿಂದೂಗಳಿಗೆ ಉಗ್ರವಾದದ ಹಣೆಪಟ್ಟಿ ಕಟ್ಟಿದ್ದಾರೆ. ಸಾಧ್ವಿ ಪ್ರಜ್ಞಾ ಅವರು ಭೋಪಾಲ್‍ನಿಂದ ಕಣಕ್ಕಿಳಿಯುತ್ತಿರುವುದು ಈ ಆರೋಪಗಳ ವಿರುದ್ಧ ನಾವು ಮಾಡುತ್ತಿರುವ ಸತ್ಯಾಗ್ರಹ ಎಂದು ಕಿಡಿಕಾರಿದರು.
Advertisement
Advertisement
ಮಧ್ಯಪ್ರದೇಶದ ಜನರು ದಿಗ್ಗಿ ರಾಜನಿಗಾಗಿ ಕಾಯುತ್ತಿದ್ದು, ಹಿಂದೂ ವಿರುದ್ಧ ಉಗ್ರ ಹೇಳಿಕೆ ನೀಡಿರುವುದಕ್ಕೆ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ. ಆದರೆ ತಾಯಿ ಭಾರತಿಯ ಭದ್ರತೆಯೇ ಬಿಜೆಪಿಯ ಮೊದಲ ಆದ್ಯತೆ ಎಂದು ಹೇಳಿ ಕಾಂಗ್ರೆಸ್ ಹಿರಿಯ ನಾಯಕ, ಭೋಪಾಲ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ವಿರುದ್ಧ ಹರಿಹಾಯ್ದರು.
Advertisement
Advertisement
55 ವರ್ಷದಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಬಿಜೆಪಿ 5 ವರ್ಷದಲ್ಲಿ ಮಾಡಿದೆ. ಹಲವು ಅಭಿವೃದ್ಧಿ ಕೆಲಸವನ್ನು ನಮ್ಮ ಸರ್ಕಾರ ದೇಶದಲ್ಲಿ ಮಾಡಿದೆ ಎಂದರು. ಹಾಗೆಯೇ ಮಧ್ಯ ಪ್ರದೇಶ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರೈತರು ಸಲ್ಲಿರುವ ಅರ್ಜಿ ಪಟ್ಟಿಯನ್ನು ಕೇಂದ್ರಕ್ಕೆ ನೀಡಿಲ್ಲ. ಈ ಮೂಲಕ ರೈತರಿಗೆ ಈ ಯೊಜನೆಯಡಿಯಲ್ಲಿ ಬರುವ ಹಣದಿಂದ ದೂರವಿಡಲಾಗುತ್ತಿದೆ. ಯೋಜನೆಯ ಲಾಭ ಈ ಭಾಗದ ರೈತರು ಪಡೆದರೆ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹೆಚ್ಚಾಗುತ್ತೆ ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
2008ರ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರನ್ನು ಬಿಜೆಪಿ ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ಭೋಪಾಲ್‍ನಲ್ಲಿ ಮೇ 12ಕ್ಕೆ ಚುನಾವಣೆ ನಡೆಯಲಿದೆ.