ವಿಶ್ವಕ್ಕೆ ಆತಂಕ ತಂದಿಟ್ಟ ರೂಪಾಂತರಿ ತಳಿ – ಹೈ ಅಲರ್ಟ್‌ ಘೋಷಣೆ, 87 ಮಂದಿಗೆ ಸೋಂಕು

Public TV
2 Min Read
covid 19 5070658 1280

– ಆಫ್ರಿಕಾ ರಾಷ್ಟ್ರಗಳಿಗೆ ತೆರಳುವ ವಿಮಾನಗಳಿಗೆ ನಿಷೇಧ
– ಭಾರತದ ಕ್ರಿಕೆಟ್‌ ತಂಡದ ಆಫ್ರಿಕಾ ಪ್ರವಾಸ ರದ್ದು ಸಾಧ್ಯತೆ

ಜಿನಿವಾ/ನವದೆಹಲಿ: ಮೂರನೇ ಕೋವಿಡ್ ಅಲೆ ಬರುವುದಿಲ್ಲ ಎಂದು ನೆಮ್ಮದಿಯಲ್ಲಿದ್ದ ಜನರಿಗೆ ಈಗ ಕೊರೊನಾ ವೈರಸ್‍ನ ಹೊಸ ರೂಪಾಂತರಿ ತಳಿ ನಿದ್ದೆಗೆಡಿಸಿದೆ. ಹೊಸ ರೂಪಾಂತರ ತಳಿಗೆ ‘ಒಮಿಕ್ರಾನ್‌ ಅಥವಾ ಬಿ.1.1.529’ ಹೆಸರಿಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ, ಈ ರೂಪಾಂತರಿ ತಳಿ ಕಳವಳಕಾರಿ ಎಂದು ಘೋಷಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಿ ತಳಿ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಡಬ್ಲ್ಯೂಹೆಚ್‍ಒ ತುರ್ತು ಸಭೆ ನಡೆಸಿತ್ತು. ಈ ರೂಪಾಂತರಿ ಕೊರೊನಾ ವೈರಸ್ ಸಾಕಷ್ಟು ಬಾರಿ ರೂಪ ಬದಲಿಸಿದ್ದು, ಕಳವಳಕಾರಿಯಾಗಿದೆ. ಈ ತಳಿಯಿಂದ ಒಬ್ಬ ವ್ಯಕ್ತಿಯಿಂದ ಉಳಿದವರಿಗೆ ಸೋಂಕು ಹಬ್ಬುವ ಪ್ರಮಾಣ ಉಳಿದ ರೂಪಾಂತರಿ ತಳಿಗಳಾದ ಡೆಲ್ಟಾ, ಡೆಲ್ಟಾ ಪ್ಲಸ್‍ಗೆ ಹೋಲಿಸಿದರೆ ಹೆಚ್ಚು ಎಂದು ಆರೋಗ್ಯ ಸಂಸ್ಥೆ ಹೇಳಿದೆ. ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ 77 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದ್ದು, ವಿಶ್ವಾದ್ಯಂತ 87 ಮಂದಿಯಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಬೆಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್ – 12 ವಿದ್ಯಾರ್ಥಿಗಳಿಗೆ ಪಾಸಿಟಿವ್ 

CORONA-VIRUS.

ನವೆಂಬರ್ 9ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ರೂಪಾಂತರಿ ತಳಿ ಪತ್ತೆ ಆಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಸೋಂಕು ಅತೀ ವೇಗದಲ್ಲಿ ಹಬ್ಬುತ್ತಿದ್ದು, ಅದಕ್ಕೆ ಒಮಿಕ್ರಾನ್‌ ಕಾರಣ ಎನ್ನಲಾಗಿದೆ. ಒಮಿಕ್ರಾನ್‌ ಅಬ್ಬರಕ್ಕೆ ಬೆಚ್ಚಿಬಿದ್ದಿರುವ ಹಲವು ರಾಷ್ಟ್ರಗಳು ದಕ್ಷಿಣ ಆಫ್ರಿಕಾ ಸೇರಿದಂತೆ ಆಫ್ರಿಕಾ ರಾಷ್ಟ್ರಗಳಿಂದ ವಿಮಾನ ಹಾರಾಟಕ್ಕೆ ನಿಷೇಧ ಹೇರಿ ಹೈ ಅಲರ್ಟ್‌ ಘೋಷಿಸಿದೆ. ಇಸ್ರೇಲ್‌, ಬೆಲ್ಜಿಯಂನಲ್ಲೂ ಈ ವೈರಸ್‌ ಪತ್ತೆಯಾಗಿದೆ. ಇದನ್ನೂ ಓದಿ: ಧಾರವಾಡ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 116 ಮಂದಿಗೆ ಕೊರೊನಾ

ಯುರೋಪ್‌ನಲ್ಲಿ ಈಗಾಗಲೇ ಕೊರೊನಾ ಆರ್ಭಟಿಸುತ್ತಿದೆ. ಈಗ ಯುರೋಪ್‌ ದೇಶಗಳಲ್ಲೇ ಈ ತಳಿ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆರ್ಥಿಕತೆಗೆ ಹೊಡೆತ ಬೀಳಬಹುದು ಎಂಬ ಆತಂಕದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕುಸಿದಿದೆ. ಡಿಸೆಂಬರ್ 17ರಿಂದ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿದ್ದು, ಪ್ರವಾಸ ರದ್ದಾಗುವ ಸಾಧ್ಯತೆಯೂ ಇದ್ದು, ಕೇಂದ್ರ ಸರ್ಕಾರದ ಸೂಚನೆಗೆ ಬಿಸಿಸಿಐ ಎದುರು ನೋಡುತ್ತಿದೆ.

Share This Article