ಉಡುಪಿ: ರಾಮಂದಿರಕ್ಕೆ ಕರ್ನಾಟಕದ ಭಕ್ತರಿಂದ ಚಿನ್ನದ ಶಿಖರವನ್ನು ಅರ್ಪಿಸುವುದಾಗಿ ಪೇಜಾವರ ಶ್ರೀ (Pejawara Sri) ಹೇಳಿದ್ದಾರೆ.
ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಮ ಮಂದಿರ (Rama Mandir) ದ ಗರ್ಭಗುಡಿಯ ಮೇಲೆ ಬಂಗಾರದ ಶಿಖರ ಸ್ಥಾಪಿಸಲಾಗುವುದು. ಕರ್ನಾಟಕದ ಭಕ್ತರು ಹೊಸದಾಗಿ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಭಕ್ತರಿಂದ ದೇಣಿಗೆ ಸಂಗ್ರಹಿಸಿ ಸ್ವರ್ಣ ಶಿಖರ ಮಾಡಲಾಗುವುದು ಎಂದರು.
ಮಂದಿರ ಪ್ರತಿಷ್ಠಾಪನೆಯ ನಾಲ್ಕು ತಿಂಗಳ ಮೊದಲು ರಥಯಾತ್ರೆ ನಡೆಯುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಭಕ್ತರನ್ನು ಒಗ್ಗೂಡಿಸಬೇಕು. ಇಡೀ ದೇಶದ ಜನ ದೇಗುಲದ ಜೊತೆ ಭಾವನಾತ್ಮಕ ಸಂಬಂಧ ಬೆಳೆಸಬೇಕು. ರಾಜ್ಯಕ್ಕೆ ರಥಯಾತ್ರೆ ಬಂದಾಗ ಚಿನ್ನದ ಶಿಖರದ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ
ಅಯೋಧ್ಯೆ (Ayodhya) ಯ ಮಂದಿರ ನಿರ್ಮಾಣ ಕಾರ್ಯ ವೇಗದಲ್ಲಿ ನಡೆಯುತ್ತಿದೆ. ರಾಮದೇವರ ಗರ್ಭಗುಡಿಯ ತಳದಲ್ಲಿ ಪೀಠದ ನಿರ್ಮಾಣ ಆಗಿದೆ. ರಾಮದೇವರ ಮೈಬಣ್ಣದ ಅಮೃತ ಶಿಲೆಯಲ್ಲೇ ಮೂರ್ತಿ ನಿರ್ಮಾಣ ಆಗಲಿದೆ. ಹೆಬ್ಬಾಗಿಲು ಸಾಗುವಾನಿ ಮರದಲ್ಲಿ ಆಗಲಿದೆ. ತೇಗದ ಮರ ಖರೀದಿ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆಯಾಗಿದೆ ಎಂದರು.
ರಾಮಮಂದಿರ 1,300 ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಾಣ ಆಗಲಿದೆ. ಪ್ರತಿ ವರ್ಷ ನೂರು ಕೋಟಿಯಷ್ಟು ದೇಣಿಗೆ ಬರುತ್ತಿದೆ. ಮಂದಿರ ನಿರ್ಮಾಣದ ಪೂರ್ಣವಾಗಿ ಸುತ್ತಲ ಪರಿಸರದ ನಿರ್ಮಾಣ ಆಗಲಿದೆ. ರಾಮಮಂದಿರ ನಿರ್ಮಾಣ ನಂತರ ಅಯೋಧ್ಯೆಯ ಸಂಪೂರ್ಣ ಅಭಿವೃದ್ಧಿ ನಡೆಯುತ್ತದೆ ಎಂದು ಪೇಜಾವರ ಶ್ರೀ ಹೇಳಿದರು.