ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಬ್ ರಿಜಿಸ್ಟರ್ ಆಫೀಸ್ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದು, ಇಬ್ಬರು ಯುವಕರ ಜೊತೆ ಯುವತಿಯನ್ನು ಮದುವೆ ಮಾಡಿಸಿ ಸುದ್ದಿಯಾಗಿದ್ದಾರೆ.
ನಿಶಾ(ಹೆಸರು ಬದಲಾಯಿಸಲಾಗಿದೆ) ಇಬ್ಬರು ಯುವಕರೊಂದಿಗೆ ಮದುವೆಯಾದ ಯುವತಿ. ನಿಶಾ ಎರಡು ವರ್ಷಗಳಿಂದ ಯಲ್ಲಾಪುರದ ಗಣಪತಿ ಭಟ್‍ನನ್ನು ಪ್ರೀತಿಸಿ 9 ತಿಂಗಳ ಹಿಂದೆ ತನ್ನ ಕುಟುಂಬದವರನ್ನು ಎದುರು ಹಾಕಿಕೊಂಡು ಯಲ್ಲಾಪುರದ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದಳು.
ನಿಶಾ ಪ್ರೀತಿಸಿ ಮದುವೆಯಾಗಿದ್ದು ಆಕೆಯ ಮನೆಯವರಿಗೆ ಇಷ್ಟವಿರಲಿಲ್ಲ. ಮನೆಯವರು ಮೊದಲು ಅವರ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ನಿಶಾ ಮದುವೆ ಆದ ಬಳಿಕ ಆಕೆಯ ಪೋಷಕರು ನಾವು ಮದುವೆಯನ್ನು ಒಪ್ಪಿದ್ದೇವೆ. ಮನೆಗೆ ಬಾ ಎಂದು ಹೇಳಿದ್ದಾರೆ. ಪೋಷಕರ ಮಾತನ್ನು ನಂಬಿ ನಿಶಾ ಮನೆಗೆ ಹೋಗಿದ್ದಾಳೆ. ತವರು ಮನೆಗೆ ಹೋದ ಬಳಿಕ ಮಮತಾ ಹಾಗೂ ತಂದೆ ಧನಂಜಯ್ ಗಣಪತಿ ಭಟ್ ನನ್ನು ಬಿಟ್ಟು ಬಿಡುವಂತೆ ಮನವೊಲಿಸಿದ್ದಾರೆ.
ಈಗ ಆಗಸ್ಟ್ 5ರಂದು ನಿಶಾಗೆ ಯಲ್ಲಾಪುರ ತಾಲೂಕಿನ ತಾರಿಮನೆ ಮಾಗೋಡಿನ ರಾಜೇಶ್‍ನೊಂದಿಗೆ ಕಾರವಾರದ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಮಾಡಿಸಿದ್ದಾರೆ. ಯಲ್ಲಾಪುರದಲ್ಲಿ ಮದುವೆ ರಿಜಿಸ್ಟರ್ ಆಗಿರುವ ಕುರಿತು ಮಾಹಿತಿ ಇದ್ದರೂ, ಕಾರವಾರದಲ್ಲಿ ಅಧಿಕಾರಿಗಳು ಇನ್ನೊಂದು ಯುವಕನೊಂದಿಗೆ ಮದುವೆ ರಿಜಿಸ್ಟರ್ ಮಾಡಿ ಎಡವಟ್ಟು ಮಾಡಿದ್ದಾರೆ.
ಪತಿ ಗಣಪತಿ ತನ್ನ ಪತ್ನಿ ನಿಶಾಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ ವಿಷಯ ಬೆಳಕಿಗೆ ಬಂದಿದೆ. ತನ್ನ ಪತ್ನಿ ಇನ್ನೊಬ್ಬನೊಂದಿಗೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಈಗ ತನ್ನ ಪತ್ನಿಯನ್ನು ತನಗೆ ಒಪ್ಪಿಸಬೇಕೆಂದು ಗಣಪತಿ ಪಟ್ಟು ಹಿಡಿದಿದ್ದು ಯಲ್ಲಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews