ಉಡುಪಿ: ಗುಜರಿ ಅಂಗಡಿಗೆ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದಿದೆ.
ಕಳೆದ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿ ಸಂಪೂರ್ಣ ಅಂಗಡಿಗೆ ಹತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿ ಸಂಪೂರ್ಣ ಅಂಗಡಿ ಹೊತ್ತಿ ಉರಿದಿದೆ. ಮಹಮ್ಮದ್ ಮೂಸ ಮತ್ತು ಅವರ ಮಗ ಸಮೀರ್ ಗುಜರಿ ವ್ಯವಹಾರವನ್ನು ನಡೆಸುತ್ತಿದ್ದರು.
ಬುಧವಾರ ಸಂಜೆ ವ್ಯಾಪಾರ ಮುಗಿಸಿ ಹೋಗಿದ್ದರು. ರಾತ್ರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಎರಡು ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಪಟ್ಟರು ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿವೆ.
ಅಂಗಡಿಯೊಳಗಿದ್ದ ಪ್ಲಾಸ್ಟಿಕ್, ಪೇಪರು- ಸಾವಿರಾರು ರಟ್ಟುಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯ್ತು. ಲಕ್ಷಾಂತರ ಮೌಲ್ಯದ ಗುಜರಿ ವಸ್ತುಗಳು ಅಂಗಡಿಯಲ್ಲಿದ್ದವು ಎಂಬ ಮಾಹಿತಿಯಿದೆ. ಬ್ರಹ್ಮಾವರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.