ಬೆಂಗಳೂರು: ಬಾಲ್ಯದಲ್ಲಿ ಬರಿಗಾಲಿನಲ್ಲಿ ಜಮೀನಿನಲ್ಲಿ ಕೆಲಸ. ನಂತರ ಸರ್ಕಾರಿ ಶಾಲೆಯಲ್ಲಿ ಅಧ್ಯಯನ. ಪಂಚೆ ಧರಿಸಿಕೊಂಡೇ ಕಾಲೇಜು ಶಿಕ್ಷಣ ಪೂರ್ಣ. ಈಗ ತನ್ನ ಕೆಲಸದ ಮೂಲಕ ಭಾರತಕ್ಕೆ ಹೆಮ್ಮೆ ತರುತ್ತಿರುವ ಕಾಯಕ.
ಸಾಧಿಸುವ ಛಲ ಒಂದಿದ್ದರೆ ವ್ಯಕ್ತಿ ಎಷ್ಟೇ ಬಡವನಾಗಿದ್ದರೂ ಮುಂದೆ ಆತ ದೊಡ್ಡ ವ್ಯಕ್ತಿಯಾಗುತ್ತಾನೆ ಎನ್ನುವ ಮಾತು ಮತ್ತೊಮ್ಮೆ ಸಾಬೀತುಪಟ್ಟಿದೆ. ಬಡತನದಲ್ಲೇ ಕಷ್ಟದಿಂದ ಓದಿ ವ್ಯಕ್ತಿಯೊಬ್ಬ ವಿಶ್ವದ ಪ್ರಭಾವಿ ವಿಜ್ಞಾನಿ ಆಗುತ್ತಾನೆ ಎನ್ನುವುದಕ್ಕೆ ಇಸ್ರೋ ಮುಖ್ಯಸ್ಥ ಶಿವನ್ ಸಾಕ್ಷಿಯಾಗಿದ್ದಾರೆ.
Advertisement
ಹೌದು. ಕೈಲಾಸವಾದಿವು ಶಿವನ್ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸರಕ್ಕಲ್‍ವಿಲೈ ಗ್ರಾಮದ ರೈತನ ಮಗ. 1957ರ ಏಪ್ರಿಲ್ 14 ರಂದು ಜನಿಸಿದ ಶಿವನ್ ತಮಿಳು ಸರ್ಕಾರಿ ಶಾಲೆಯಲ್ಲಿ ಓದಿ 1980ರಲ್ಲಿ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಎಂಜಿನಿಯರಿಂಗ್ ಪದವಿ ಓದಿದ್ದರು. 1982ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ವೈಮಾನಿಕ ಎಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2006ರಲ್ಲಿ ಐಐಟಿ ಮುಂಬೈನಲ್ಲಿ ಏರೋಸ್ಪೇಸ್(ವೈಮಾನಿಕ) ಎಂಜಿನಿಯರಿಂಗ್ ನ ವಿಷಯದಲ್ಲೇ ಪಿಎಚ್‍ಡಿ ಗಳಿಸಿದರು.
Advertisement
Advertisement
ವಿಶೇಷ ಏನೆಂದರೆ ಇವರ ಕುಟುಂಬದಲ್ಲಿ ಮೊದಲು ಪದವಿ ಪೂರ್ಣಗೊಳಿಸಿದ ವ್ಯಕ್ತಿ ಶಿವನ್ ಆಗಿದ್ದು, ಮನೆಯಲ್ಲಿನ ಬಡತನದಿಂದಾಗಿ ಸಹೋದರ ಹಾಗೂ ಇಬ್ಬರು ಸಹೋದರಿಯರಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಶಿವನ್, ನಾನು ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಲ್ಲಿ ಅಪ್ಪನಿಗೆ ಸಹಾಯ ಮಾಡುತ್ತಿದ್ದೆ. ಈ ಕಾರಣದಿಂದಾಗಿ ತಂದೆ ನಮ್ಮ ಮನೆಯ ಹತ್ತಿರವಿರುವ ಕಾಲೇಜಿಗೆ ನನ್ನನ್ನು ಸೇರಿಸಿದರು. ಯಾವತ್ತು ನಾನು ನನ್ನ ಬಿಎಸ್‍ಸಿ(ಮ್ಯಾಥಮ್ಯಾಟಿಕ್ಸ್)ಯನ್ನು ಶೇ.100ರಷ್ಟು ಮಾಕ್ರ್ಸ್ ತೆಗೆದುಕೊಂಡು ಉತ್ತೀರ್ಣನಾದೆನೋ ಅಂದೇ ತಂದೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸಿದರು. ಇದನ್ನೂ ಓದಿ: ಮೋದಿ ಆಲಂಗಿಸಿ ಕಣ್ಣೀರಿಟ್ಟ ಶಿವನ್
Advertisement
ಸಣ್ಣವನಾಗಿದ್ದಾಗ ಚಪ್ಪಲಿ ಇಲ್ಲದೆ ಶಾಲೆಗೆ ಹೋಗುತ್ತಿದ್ದೆ. ಧೋತಿ(ಪಂಚೆ) ಉಟ್ಟುಕೊಂಡೇ ಇಡೀ ನನ್ನ ಕಾಲೇಜು ಜೀವನವನ್ನು ಕಳೆದಿದ್ದೇನೆ. ವಿದ್ಯಾಭ್ಯಾಸ ಮುಂದುವರಿಸಲು ಎಂಐಟಿಗೆ ಸೇರಿದಾಗಲೇ ನಾನು ಮೊದಲ ಬಾರಿ ಪ್ಯಾಂಟ್ ಹಾಕಲು ಶರುಮಾಡಿದ್ದೆ ಎಂದು ಬಾಲ್ಯದ ಜೀವನದ ಬಗ್ಗೆ ಮಾಧ್ಯಮಕ್ಕೆ ಅವರು ಪ್ರತಿಕ್ರಿಯಿಸಿದ್ದರು.
1982ರಲ್ಲಿ ಇಸ್ರೋ ಕುಟುಂಬ ಸೇರಿಕೊಂಡ ಶಿವನ್ ಆ ನಂತರ ಪೋಲಾರ್ ಸ್ಯಾಟಲೈಟ್ ವೆಹಿಕಲ್(ಪಿಎಸ್‍ಎಲ್‍ವಿ) ರಾಕೆಟ್ ಯೋಜನೆಗಳಲ್ಲಿ ಕೆಲಸ ಮಾಡಿದ್ದರು. 2018ರ ಜನವರಿ ಅಂದರೆ ಇಸ್ರೋ ಮುಖ್ಯಸ್ಥರಾಗುವ ಮೊದಲು ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್(ವಿಎಸ್‍ಎಸ್‍ಸಿ)ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ರಾಕೆಟ್ ವಿಚಾರದಲ್ಲಿ ಇವರಿಗೆ ಇರುವ ವಿಷಯ ಜ್ಞಾನವನ್ನು ತಿಳಿದು ಇವರನ್ನು ಇಸ್ರೋದಲ್ಲಿ `ರಾಕೆಟ್ ಮ್ಯಾನ್’ ಎಂದೇ ಕರೆಯಲಾಗುತ್ತದೆ. ಇಷ್ಟು ಮಾತ್ರವಲ್ಲದೇ 2017ರ ಫೆಬ್ರವರಿ 15ರಂದು ಒಂದೇ ಬಾರಿಗೆ ಪಿಎಸ್‍ಎಲ್‍ವಿ -ಸಿ37 ಮೂಲಕ 104 ಉಪಗ್ರಹಗಳನ್ನು ಉಡಾಯಿಸುವ ಮೂಲಕ ಇಸ್ರೋ ವಿಶ್ವದಾಖಲೆ ನಿರ್ಮಿಸಿತ್ತು. ಈ ದಾಖಲೆ ನಿರ್ಮಾಣದಲ್ಲೂ ಶಿವನ್ ಅವರು ಪ್ರಮುಖ ಪಾತ್ರವಹಿಸಿದ್ದರು. ಇದನ್ನೂ ಓದಿ: ಇಡೀ ಭಾರತ ಇಸ್ರೋ ಜೊತೆಗಿದೆ: ಮೋದಿ
ಶಿವನ್ ಅವರು ರಾಕೆಟ್ ತಜ್ಞ ಮಾತ್ರವಲ್ಲದೆ ತಮಿಳು ಶಾಸ್ತ್ರೀಯ ಸಂಗೀತ ಹಾಗೂ ಹೂವಿನ ಗಿಡಗಳನ್ನು ನೆಡುವ ಮೂಲಕ ಗಾರ್ಡನ್ ನಿರ್ಮಾಣ ಮಾಡುವುದರಲ್ಲಿಯೂ ನಿಪುಣರಾಗಿದ್ದಾರೆ. ನಾನು ವಿಎಸ್‍ಎಸ್‍ಎಸ್ ನಿರ್ದೇಶಕನಾಗಿದ್ದ ಸಮಯದಲ್ಲಿ ತಿರುವನಂತಪುರಂನ ಮನೆಯ ಗಾರ್ಡನ್ ನಲ್ಲಿ ಸಾಕಷ್ಟು ಬಗೆಯ ಗುಲಾಬಿ ಹೂವಿನ ಗಿಡಗಳಿದ್ದವು. ಸದ್ಯ ನಾನು ಬೆಂಗಳೂರಿನಲ್ಲಿದ್ದು, ಸಮಯ ಸಾಲುತ್ತಿಲ್ಲ ಎಂದು ತಿಳಿಸಿದ್ದರು.
ತಾಂತ್ರಿಕ ದೋಷದಿಂದಾಗಿ ಜುಲೈ 15ರಂದು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಕೊನೆಯ ಕ್ಷಣದಲ್ಲಿ ಮುಂದೂಡಿಕೆಯಾಗಿ ಜುಲೈ 22ಕ್ಕೆ ಉಡಾವಣೆ ಮಾಡಲಾಗಿತ್ತು. 3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪುಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಆದರೆ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತು.
ತಡರಾತ್ರಿ 1.50ಕ್ಕೆ ಸಂಪರ್ಕ ಕಳೆದುಕೊಂಡರೂ ಬೆಳಗ್ಗೆ 10 ಗಂಟೆಯವರೆಗೆ ವಿಜ್ಞಾನಿಗಳು ಕೇಂದ್ರವನ್ನು ಬಿಟ್ಟು ತೆರಳದೇ ಹೇಗಾದರೂ ಮಾಡಿ ವಿಕ್ರಂ ಲ್ಯಾಂಡರ್ ಸಂಪರ್ಕ ಸಾಧಿಸಲು ಶತಪ್ರಯತ್ನ ನಡೆಸುತ್ತಿದ್ದರು. ಮುಖ್ಯವಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಮತ್ತು ಯೋಜನಾ ನಿರ್ದೇಶಕಿ ಎಂ ವನಿತಾ, ಮಿಷನ್ ನಿರ್ದೇಶಕಿ ರಿತು ಕಂಟ್ರೋಲ್ ಕೊಠಡಿಯಲ್ಲೇ ಆಶಾಭಾವನೆಯಿಂದ ಪ್ರಯತ್ನ ನಡೆಸುತ್ತಿದ್ದರು. ಇದನ್ನೂ ಓದಿ: ಇಸ್ರೋ ಶ್ರಮಕ್ಕೆ ಅಭಿನಂದನೆ