ಬೆಂಗಳೂರು: ನಮಗೆ ಈ ಜೀವನವೇ ಬೇಡ, ದಯಮಾಡಿ ನಮ್ಮನ್ನು ಸಾಯಲು ಬಿಡಿ ಎಂದು ಡೆತ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇಡೀ ಕುಟುಂಬಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಗಾಂಧಿ, ಶಾಲಿನಿ, ಭಾನುಶ್ರೀ, ಹೇಮಶ್ರೀ ನಾಪತ್ತೆಯಾದವರು. ಶಾಲಿನಿ ಸಹೋದರ ತುಮಕೂರಿನಲ್ಲಿರುವ ಚಿರಂಜೀವಿ ಪ್ರತಿನಿತ್ಯ ಸಹೋದರಿ ಜೊತೆ ಮಾತನಾಡುತ್ತಿದ್ದರು. ಆದರೆ ಆಗಸ್ಟ್ 12 ರಂದು ಮನೆಗೆ ಕರೆಮಾಡಿದಾಗ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಭಯಗೊಂಡ ಚಿರಂಜೀವಿ, ಕೂಡಲೇ ಅಕ್ಕನ ಮನೆ ಬಳಿ ಇದ್ದ ತನ್ನ ಸ್ನೇಹಿತನಿಗೆ ಮಾಹಿತಿ ತಿಳಿಸಿದ್ದಾರೆ.
ಮನೆಗೆ ಹೋಗಿ ಚೆಕ್ ಮಾಡಲು ಹೇಳಿದ್ದಾರೆ. ಈ ವೇಳೆ ಮನೆ ಸಂಪೂರ್ಣ ಲಾಕ್ ಆಗಿದೆ. ಮನೆ ಮಾಲೀಕರನ್ನ ಕೇಳಿದಾಗ ಅವರು ಫ್ಯಾಮಿಲಿ ಸಮೇತ ಹೋಗಿದ್ದಾರೆ ಅಂದಿದ್ದಾರೆ. ಕೂಡಲೇ ಸ್ನೇಹಿತ ಈ ಮಾಹಿತಿಯನ್ನು ಚಿರಂಜೀವಿಗೆ ಮಾಹಿತಿ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಶಾಕ್ ಆಗಿ ಚಿರಂಜೀವಿ ಬೆಂಗಳೂರಿಗೆ ಬಂದಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಸಿಕ್ಕ ಚೀಲದಲ್ಲಿ ಸಿಕ್ತು ನವಜಾತ ಶಿಶು
ಅಲ್ಲದೆ ತನ್ನ ಬಳಿ ಇದ್ದ ಡೂಪ್ಲಿಕೇಟ್ ಕೀ ತೆರೆದು ನೋಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ಮನೆಯ ಕಿಟಿಕಿ ಬಳಿ ಕುಟುಂಬ ಸೂಸೈಡ್ ನೋಟ್ ಬರೆದಿಟ್ಟಿರುವುದು ಗೊತ್ತಾಗಿದೆ. ಅದರಲ್ಲಿ ‘ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನಮಗೆ ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ ಸಾಯಲು ಬಿಡಿ ಎಂದು ಬರೆಯಲಾಗಿತ್ತು.
ಕೂಡಲೇ ಚಿರಂಜೀವಿ ಅವರು ಬಾಗಲಗುಂಟೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸದ್ಯ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.