ಮಂಡ್ಯ: ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ನಾಗೇಗೌಡ ಎಂಬವರೇ ಆನೆ ದಾಳಿಗೊಳಗಾಗಿ ಗಾಯಗೊಂಡಿರುವ ರೈತ. ತನ್ನ ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಆನೆ ನಾಗೇಗೌಡರನ್ನ ಜೋರಾಗಿ ಗುದ್ದಿ ಬೀಳಿಸಿದೆ.
Advertisement
Advertisement
ಆನೆ ದಾಳಿಗೆ ಒಳಗಾದ ರೈತ ಭಯದಿಂದ ಜೋರಾಗಿ ಕೂಗಿಗೊಂಡಿದ್ದಾರೆ. ಇದನ್ನು ನೋಡಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಜೋರಾಗಿ ಸದ್ದು ಮಾಡಿ ಆನೆಯನ್ನು ಓಡಿಸಿದ್ದಾರೆ. ತಕ್ಷಣ ಆನೆ ದಾಳಿಯಿಂದ ಗಾಯಗೊಂಡ ರೈತ ನಾಗೇಗೌಡರನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಗ್ರಾಮದ ಸಮೀಪವಿರುವ ಕಾಡಿನಿಂದ ಆನೆ ಬಂದಿದ್ದು, ಹಲವಾರು ದಿನಗಳಿಂದ ರಸ್ತೆ ಬದಿ ಆರಾಮವಾಗಿ ಆನೆ ಓಡಾಡಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಆನೆ ದಾಳಿಗೊಳಗಾದ ರೈತ ನಾಗೇಗೌಡರಿಗೆ ಪರಿಹಾರ ನೀಡಿ, ಚಿಕಿತ್ಸಾ ವೆಚ್ಚ ಭರಿಸಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.