ಬಂಟ್ವಾಳ| ಚಾಲಕಿ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು – ವೃದ್ಧೆ ಸಾವು

Public TV
1 Min Read
bantwal accident

ಮಂಗಳೂರು: ಚಾಲಕಿಯ ನಿಯಂತ್ರಣ ಕಳೆದುಕೊಂಡ ಕಾರು ಅಂಗಡಿಗೆ ನುಗ್ಗಿ, ಅಂಗಡಿ ಮುಂದೆ ಕುಳಿತ್ತಿದ್ದ 91 ವರ್ಷದ ವೃದ್ಧೆ ಸಾವನ್ನಪ್ಪಿರುವ ಘಟನೆ ಬಂಟ್ವಾಳದ ಚೆನ್ನೈತ್ತೋಡಿ ಗ್ರಾಮದ ಪಾಲೆದಮರ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ.

ಅಪಘಾತದ ಭೀಕರ ದೃಶ್ಯ ಅಂಗಡಿ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಂಟ್ವಾಳದ ವಾಮದಪದವು ನಿವಾಸಿ 91 ವರ್ಷದ ಸುಮತಿ ಸಾವನ್ನಪ್ಪಿದ ದುರ್ದೈವಿ. ಮತ್ತೋರ್ವ ಗ್ರಾಹಕ ಸ್ಥಳೀಯ ನಿವಾಸಿ ಲೂಯಿಸ್ ಡಿಕೋಸ್ತಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೋಭಾ ಎಂಬವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಅಂಗಡಿಗೆ ನುಗ್ಗಿ ಬಂದಿದೆ. ಈ ವೇಳೆ ಅಂಗಡಿಗೆ ಬಂದಿದ್ದ ಗ್ರಾಹಕ ಲೂಯಿಸ್ ಡಿಕೋಸ್ತಾರಿಗೆ ಕಾರು ಡಿಕ್ಕಿ ಹೊಡೆದು, ಬಳಿಕ ಅಲ್ಲೇ ಕೂತಿದ್ದ ವೃದ್ಧೆ ಸುಮತಿಗೆ ಡಿಕ್ಕಿಯಾಗಿದೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article