ದಾವಣಗೆರೆ: ಆಟೋ ಹಾಗೂ ಕೆಎಸ್ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹರಪ್ಪನಹಳ್ಳಿ ಪಟ್ಟಣದ ಹಿರೇಕೆರೆ ಬಳಿ ನಡೆದಿದೆ.
ಹರಪ್ಪನಹಳ್ಳಿನ ಆಶ್ರಯ ಕಾಲೊನಿ ನಿವಾಸಿಗಳಾದ ನಾಗರಾಜ್ (35) ಹಾಗೂ ಲಕ್ಷ್ಮೀ (30) ಮೃತ ದಂಪತಿ. ನಾಗರಾಜ್ ಆಟೋ ಚಾಲಕರಾಗಿದ್ದು, ಎಂದಿನಂತೆ ಇಂದು ಬೆಳಗ್ಗೆ ದಂಪತಿ ಪಟ್ಟಣಕ್ಕೆ ಹೊರಟಿದ್ದರು. ಹಿರೇಕೆರೆ ಸಮೀಪದಲ್ಲಿ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ನಾಗರಾಜ್ ಪ್ರಯತ್ನಿಸಿದ್ದ. ಆದರೆ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿದ್ದಂತೆಯೇ ಎದುರಿಗೆ ಬಂದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಘಟನೆಯಿಂದ ಸ್ಥಳದಲ್ಲಿಯೇ ದಂಪತಿ ಮೃತಪಟ್ಟಿದ್ದು, ಚಾಲಕ ಘಟನಾ ಸ್ಥಳದಲ್ಲಿಯೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ನಾಗರಾಜ್, ಲಕ್ಷ್ಮೀ ದಂಪತಿಗೆ ಹೆಣ್ಣು ಮಗುವಿದ್ದು, ತಂದೆ-ತಾಯಿಯನ್ನು ಕಳೆದುಕೊಂಡು ಇದೀಗ ತಬ್ಬಲಿಯಾಗಿದೆ.
ಈ ಕುರಿತು ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.