ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಾಕು ನಾಯಿಯೊಂದು ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿ ಕಚ್ಚಿದ ಘಟನೆ ಶನಿವಾರ ನಡೆದಿದೆ. ಈ ಘಟನೆ ಸಂಬಂಧಿಸಿದಂತೆ ನಾಯಿ ಮಾಲಕಿ ವಿರುದ್ಧ ಮಂಗಳೂರು ನಗರದ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಪತ್ರಾವೋ ಲೇನ್ ಬಳಿಯ ಅಲೋಷಿಯಸ್ ಕಾಲೇಜಿಗೆ ಹೋಗುವ ಇಂಟರ್ ಲಾಕ್ ರಸ್ತೆಯಲ್ಲಿನ ಮಹೇಂದ್ರ ಮ್ಯಾನರ್ ಅಪಾರ್ಟ್ ಮೆಂಟಿನ ಎದುರುಗಡೆ ಈ ಘಟನೆ ನಡೆದಿದೆ. ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಿ.ಬಿ.ಎಂ. ವಿದ್ಯಾರ್ಥಿಯ ಮೇಲೆ ಸ್ಥಳೀಯ ನಿವಾಸಿಯೊಬ್ಬರ ನಾಯಿ ಕಾಂಪೌಂಡ್ ಒಳಗಡೆಯಿಂದ ರಸ್ತೆಗೆ ಹಾರಿ ಬಂದು ದಾಳಿ ಮಾಡಿ, ಗಾಯಗೊಳಿಸಿದೆ. ಈ ವೇಳೆ ವಿದ್ಯಾರ್ಥಿಯ ಕಿರುಚಾಟ ಕೇಳಿ ಸ್ಥಳೀಯ ನಿವಾಸಿಗಳು ಮತ್ತು ನಾಯಿಯ ಮಾಲೀಕರು ಸ್ಥಳಕ್ಕೆ ಬಂದು ನಾಯಿಯನ್ನು ಬಿಡಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಯು ನೀವು ನಾಯಿಯನ್ನು ಕಟ್ಟಿ ಹಾಕದೇ ಯಾಕೆ ನಿರ್ಲಕ್ಷ್ಯತನದಿಂದ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಾಲಕಿ ವಿದ್ಯಾರ್ಥಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿ ದೂರಿದ್ದಾರೆ.
Advertisement
ಈ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.