ಚಿಕ್ಕಬಳ್ಳಾಪುರ: ಚುನಾವಣಾ ಪ್ರವಾಸ ಭಾಗ್ಯಕ್ಕೆ ಬಾಲಕ ಬಲಿಯಾದನಾ ಅನ್ನೋ ಅನುಮಾನದ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಪೂಜನಹಳ್ಳಿ ಗ್ರಾಮದಿಂದ ತಮಿಳುನಾಡಿನ ಮೇಲ್ ಮರವತ್ತೂರು ಓಂ ಶಕ್ತಿ ದೇವಸ್ಥಾನಕ್ಕೆ ಬಸ್ ಮೂಲಕ 50ಕ್ಕೂ ಹೆಚ್ಚು ಮಂದಿ ಪ್ರವಾಸಕ್ಕೆ ತೆರಳಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುವಾಗ ಮಹಾಬಲೀಪುರಂ ಬೀಚ್ ನಲ್ಲಿ ಆಟ ಆಡುವ ವೇಳೆ ಬಾಲಕ ಅಭಿಷೇಕ್ (14) ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
Advertisement
ಈ ಪ್ರವಾಸವನ್ನ ಗ್ರಾಮದ ಚಂದ್ರಕಲಾ ಎಂಬವರು ಆಯೋಜನೆ ಮಾಡಿದ್ದರು. ಹೀಗಾಗಿ ಚಂದ್ರಕಲಾ ಯಾವುದೋ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು, ಚುನಾವಣಾ ಸಮಯದಲ್ಲಿ ಮತದಾರರ ಓಲೈಕೆಗೆ ಪ್ರವಾಸ ಭಾಗ್ಯ ಆಯೋಜಿಸಿರಬಹದು ಅಂತ ಶಂಕಿಸಲಾಗಿದೆ.
Advertisement
Advertisement
ಘಟನೆ ನಡೆದ ನಂತರ ಬಾಲಕನ ಮೃತದೇಹ ಹುಡುಕಾಟದ ಕಾರ್ಯ ನಡೆಸುವುದರ ಬದಲು, ಪ್ರವಾಸಕ್ಕೆ ಕರೆದುಕೊಂಡು ಹೋದವರನ್ನ ವಾಪಸ್ ಕರೆದುಕೊಂಡು ಬಂದಿದ್ದಾರೆ. ಇದೆಲ್ಲದರ ನಡುವೆ ಪ್ರವಾಸ ಆಯೋಜನೆ ಮಾಡಿದ್ದ ಚಂದ್ರಕಲಾ ಊರಿಗೆ ಬಾರದೇ ಅರ್ಧ ದಾರಿಯಲ್ಲಿ ಬಸ್ ನಿಂದ ಇಳಿದು ನಾಪತ್ತೆಯಾಗಿದ್ದಾರೆ. ಇದ್ರಿಂದ ಚಂದ್ರಕಲಾ ವಿರುದ್ಧ ಮೃತನ ಪೋಷಕರು ಹಾಗೂ ಗ್ರಾಮಸ್ಥರು ಕೆಂಡಾಮಂಡಲರಾಗಿದ್ದಾರೆ. ಮತ್ತೊಂದೆಡೆ 20 ವರ್ಷಗಳ ನಂತರ ಹುಟ್ಟಿದ್ದ, ಇಡೀ ವಂಶಕ್ಕೆ ಗಂಡು ದಿಕ್ಕಾಗಿದ್ದ ಒಬ್ಬ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
Advertisement
ಘಟನೆ ಸಂಬಂಧ ಮಹಾಬಲೀಪುರಂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಇತ್ತ ಸ್ಥಳೀಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಂದ್ರಕಲಾ ವಿರುದ್ಧ ದೂರು ದಾಖಲಿಸಲು ಹೋದ್ರೆ, ಕೆಲ ರಾಜಕೀಯ ಮುಖಂಡರು ದೂರು ದಾಖಲಿಸದಂತೆ ಒತ್ತಡ ಹಾಕಿರುವ ವಿಚಾರ ತಿಳಿದು ಬಂದಿದೆ. ಒಟ್ಟಿನಲ್ಲಿ ಇದೀಗ ಪ್ರವಾಸ ಭಾಗ್ಯದಿಂದ ಬಾಲಕ ಸಾವನ್ನಪ್ಪಿರುವ ಪ್ರಕರಣ ಸಹಜವಾಗಿ ರಾಜಕೀಯ ತಿರುವು ಪಡೆದುಕೊಂಡಿದೆ.