ದಾವಣಗೆರೆ: ಬ್ಯಾಂಕ್ ಅಧಿಕಾರಿಗಳು ಸಾಲ ನೀಡಲು ಸತಾಯಿಸಿದ ಕಾರಣಕ್ಕೆ ಮನನೊಂದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಿಲು ಗ್ರಾಮದಲ್ಲಿ ನಡೆದಿದೆ.
ನಿಟ್ಟೂರು ಗ್ರಾಮದ ಪ್ರಕಾಶ್ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದ ರೈತರಾಗಿದ್ದಾರೆ. ಹಲವಾಗಿಲಿನ ಪ್ರಗತಿ ಕೃಷ್ಣಾ ಪ್ರಗತಿ ಬ್ಯಾಂಕ್ ನಲ್ಲಿ ಜಮೀನಿನ ಮೇಲೆ ಕೃಷಿ ಸಾಲ ನೀಡುವಂತೆ ಹಲವಾರು ಬಾರಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿಕೊಂದಿದ್ದರು.
ಆದರೆ ಬ್ಯಾಂಕ್ ಅಧಿಕಾರಿಗಳು ಮಾತ್ರ ರೈತ ಪ್ರಕಾಶ್‍ರನ್ನು ಬ್ಯಾಂಕಿಗೆ ಅಲೆದಾಡಿಸಿದ್ದಾರೆ. ಕೆಲ ದಿನಗಳ ನಂತರ ಸಾಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಈ ವರ್ತನೆಗೆ ಬೇಸತ್ತ ರೈತ ಪ್ರಕಾಶ ಬ್ಯಾಂಕಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ತನ್ನ ಸಾವಿಗೆ ಬ್ಯಾಂಕ್ ಮ್ಯಾನೇಜರ್ ಉಮೇಶ್ ರೆಡ್ಡಿ ಯೇ ಕಾರಣ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿಟ್ಟುಕೊಂಡಿದ್ದ.
ಆತ್ಮಹತ್ಯೆಗೆ ಯತ್ನಿಸಿದ ರೈತ ಪ್ರಕಾಶ್‍ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ