ಬೆಳಗಾವಿ: ಜ್ವರ ಬಂದಿದೆ ಎಂದು ವ್ಯಕ್ತಿಯೊಬ್ಬರು ಯಾರದ್ದೋ ಮಾತು ಕೇಳಿ ಡಾಕ್ಟರ್ ಹತ್ತಿರ ಹೋದರು. ಆದರೆ ಆ ಡಾಕ್ಟರ್ ಮಹಾಶಯ ಬೇಕಾಬಿಟ್ಟಿ ಇಂಜೆಕ್ಷನ್ ಕೊಟ್ಟು ವ್ಯಕ್ತಿಯ ಬದುಕಿಗೇ ಕುತ್ತು ತಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ರಸ್ತೆಯಿಂದ ಕುಂಟುತ್ತಾ ಇಳಿಯುತ್ತಿರುವ ಯುವಕನಿಗೆ ಇದೀಗ ಆಸ್ಪತ್ರೆಯ ಬೆಡ್ ನಲ್ಲಿ ಯಾರಿಗೂ ಬೇಡವಾದ ನರಳಾಟ. ಈ ಅಮಾಯಕನ ಶೋಚನಿಯ ಸ್ಥಿತಿಗೆ ಕಾರಣ ಗುರುನಾಥ್ ಪಾಟೀಲ್ ಅನೆನ್ನೋ ಹೋಮಿಯೋಪತಿ ಡಾಕ್ಟರ್ ಮಾಡಿರುವ ಮಹಾ ಎಡವಟ್ಟು.
Advertisement
Advertisement
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಗೋಟೂರಿನ ನಿವಾಸಿ ಶಂಕರ್. ಕಳೆದ ತಿಂಗಳು ಸಣ್ಣ ಮಟ್ಟಿಗೆ ಜ್ವರ ಬಂದಿತ್ತು. ಆಗ ಸೀದಾ ಹೋಗಿದ್ದು ಈ ಹೋಮಿಯೋಪತಿ ವೈದ್ಯ ಗುರುನಾಥ್ ಬಳಿಗೆ. ಚೆಕ್ ಮಾಡಿದ ಡಾಕ್ಟರ್ ಭರ್ಜರಿಯಾಗಿ ಎರಡು ಇಂಜೆಕ್ಷನ್ ಚುಚ್ಚಿದ್ದರು. ಔಷಧಿ ಕೊಟ್ಟು ಇದನ್ನು ನುಂಗು, ನೀನು ನೂರಕ್ಕೆ ನೂರು ಸರಿ ಹೋಗ್ತಿಯಾ ಎಂದು ಮನೆಗೆ ಕಳಸಿಕೊಟ್ಟರು.
Advertisement
ಡಾಕ್ಟರ್ ಗುರುನಾಥ್ ಅದ್ಯಾವ ನರದ ಮೇಲೆ ಸೂಜಿ ಚುಚ್ಚಿದರೋ ಗೊತ್ತಿಲ್ಲ ಚುಚ್ಚಿದ ಜಾಗದಲ್ಲಿ ಕೀವಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಅಸಲಿಗೆ ಹೋಮಿಯೋಪತಿ ವೈದ್ಯರಾಗಿರೋ ಗುರುನಾಥ್ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕರ್ನಾಟಕ ಖಾಸಗಿ ವೈದ್ಯಕೀಯ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಸದ್ಯ ಈ ಕೇಸ್ ಸಂಕೇಶ್ವರ ಪೊಲೀಸರ ಕೈಯಲ್ಲಿದ್ದು, ನ್ಯಾಯ ಕೊಡಿಸಬೇಕಿದೆ.