ಎ ಪ್ಲಸ್ – ಉಪ್ಪಿ ಶಿಷ್ಯನ ರುಚಿಯಾದ ಉಪ್ಪಿಟ್ಟು!

Public TV
1 Min Read
A PLUS

ಬೆಂಗಳೂರು: ಟ್ರೈಲರಿನ ಕಾರಣದಿಂದಲೇ ಸಾಕಷ್ಟು ಸುದ್ದಿ ಮಾಡಿದ್ದ ವಿಜಯ್ ಸೂರ್ಯ ನಿರ್ದೇಶನದ ಎ ಪ್ಲಸ್ ಚಿತ್ರ ತೆರೆ ಕಂಡಿದೆ. ಈ ಟ್ರೈಲರ್ ಕಂಡ ಅನೇಕರು ಇದು ಉಪೇಂದ್ರ ಅಭಿನಯದ ಎ ಚಿತ್ರದ ಮುಂದುವರೆದ ಭಾಗ ಅಂತಲೂ ಅಂದುಕೊಂಡಿದ್ದರು. ಅದನ್ನೂ ಕೂಡಾ ಪ್ಲಸ್ ಆಗಿಸಿಕೊಂಡಿದ್ದ ಈ ಚಿತ್ರ ಒಂದು ಭರಪೂರ ಕಂಟೆಂಟಿನ ಕಥಾನಕದೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ.

ಆರಂಭದಲ್ಲಿಯೇ ಇದು ಭಿನ್ನ ಪ್ರಯೋಗಗಳ ಚಿತ್ರ ಅಂತ ನಿರ್ದೇಶಕ ವಿಜಯ್ ಸೂರ್ಯ ಹೇಳಿಕೊಂಡಿದ್ದರು. ಆ ಮಾತಿಗೆ ತಪ್ಪದೆ ಹಲವಾರು ಹೊಸಾ ಪ್ರಯೋಗಗಳ ಮೂಲಕವೇ ಅವರು ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಪ್ರೀತಿ, ದ್ವೇಷ ಮತ್ತು ಕನಸಿನಂಥಾ ಹೂರಣ ಹೊಂದಿರೋ ಕಥೆಯನ್ನು ಅಡಿಗಡಿಗೆ ಟ್ವಿಸ್ಟು ಕೊಡುತ್ತಾ, ಪ್ರೇಕ್ಷಕರನ್ನು ಚೂರು ಗೊಂದಲಕ್ಕೆ ದೂಡಿದಂತೆ ಮಾಡಿ ಮರುಕ್ಷಣವೇ ಅದನ್ನು ಪರಿಹಾರ ಮಾಡುತ್ತಾ ಈ ಚಿತ್ರವನ್ನು ಕುತೂಹಲಕರವಾಗಿಯೇ ಕಟ್ಟಿ ಕೊಟ್ಟಿದ್ದಾರೆ.

A PLUS 1

ಈ ಚಿತ್ರದ ನಾಯಕನದ್ದು ವಿಚಿತ್ರ ಕ್ಯಾರೆಕ್ಟರ್. ತನ್ನ ಗುರುವಿನ ಕುಟುಂಬವನ್ನು ನಿರ್ನಾಮ ಮಾಡಿದ ವ್ಯಕ್ತಿಯನ್ನು ಸದೆ ಬಡಿಯಲು ಮುಂದಾದ ಆತನಿಗೆ ನಿರ್ದೇಶಕನಾಗೋ ಹಂಬಲ. ತಾನು ಕಂಡ ಕಹೀ ಸತ್ಯಗಳನ್ನೇ ಒಂದೊಳ್ಳೆ ಚಿತ್ರವಾಗಿಸಬೇಕೆಂಬ ಕನಸು ಆತನದ್ದು. ಇಂಥವನನ್ನು ಪ್ರೀತ್ಸೋ ಅಂತ ಬೆಂಬೀಳುವ ನಾಯಕಿ, ಆಕೆಯೊಳಗೂ ಕೂಡಾ ಒಂದು ದ್ವೇಷ… ಅರೆ ಕ್ಷಣಕ್ಕೊಂದು ಟ್ವಿಸ್ಟುಗಳ ಮೂಲಕ ಕುತೂಹಲ ಉಳಿಸಿಕೊಂಡು ಸಾಗುವಲ್ಲಿ ಮೊದಲ ಪ್ರಯತ್ನದಲ್ಲಿಯೇ ವಿಜಯ್ ಸೂರ್ಯ ಗಮನ ಸೆಳೆದಿದ್ದಾರೆ.

ನಾಯಕನಾಗಿ ಸಿದ್ದು ಆ ಪಾತ್ರವನ್ನು ಪರಿಣಾಮಕಾರಿಯಾಗಿಸಿದ್ದಾರೆ. ನಾಯಕಿಯಾಗಿ ಸಂಗೀತಾ ಪ್ರೀತಿ ಮತ್ತು ದ್ವೇಷ ತುಂಬಿದ ನಟನೆಯಿಂದ ಪ್ರೇಕ್ಷಕರನ್ನು ಕಾಡುತ್ತಾರೆ. ಭೂಪಿಂದರ್ ಸಿಂಗ್ ರೈನಾ ಛಾಯಾಗ್ರಹಣ ಈ ಚಿತ್ರದ ಒಟ್ಟಂದವನ್ನು ಹೆಚ್ಚಿಸಿದೆ. ಇದೊಂದು ರಗಡ್ ಸ್ಟೋರಿ ಹೊಂದಿದ ಕಥೆ ಎಂಬುದು ಟ್ರೈಲರಿನಿಂದಲೇ ಗೊತ್ತಾಗಿತ್ತು. ಆದರೆ ಹಾಡು ಫೈಟುಗಳಿಲ್ಲದೆಯೂ ಈ ಚಿತ್ರವನ್ನು ರೂಪಿಸಲು ಕಾರಣವಿದೆ. ಅದೇನೆಂದು ತಿಳಿಯಲು ಒಮ್ಮೆ ಥೇಟರಿನತ್ತ ಹೋದರೊಳಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

3 1

Share This Article
Leave a Comment

Leave a Reply

Your email address will not be published. Required fields are marked *