ರಾಂಚಿ: 4 ವರ್ಷದ ಮಗುವಿಗೆ ಮೇಲ್ಭಾಗದಲ್ಲಿ ದವಡೆ ಹಲ್ಲು ಬಂದಿದ್ದಕ್ಕೆ ತಾಯಿಯೊಬ್ಬಳು ನಾಯಿ ಜೊತೆ ಮದುವೆ ಮಾಡಿಸಿದ ಘಟನೆ ಜಾರ್ಖಂಡ್ ರಾಜ್ಯದ ಪೋಟ್ಕಾದಲ್ಲಿ ನಡೆದಿದೆ.
ಬಾಲಕನ ಮದುವೆಯಲ್ಲಿ ಗ್ರಾಮಸ್ಥರು ಎಲ್ಲಾ ಭಾಗಿಯಾಗಿದ್ದು, ಸಂಪ್ರದಾಯದಂತೆ ಮದುವೆ ಮಾಡಿಸಲಾಗಿದೆ. ಈ ಎಲ್ಲಾ ಸಂಪ್ರದಾಯಗಳು ಅಚ್ಚರಿ ಮೂಡಿಸುವಂತಿದೆ. ಹುಟ್ಟಿದ 10 ತಿಂಗಳ ನಂತರ ಬಾಲಕನಿಗೆ ಮೇಲ್ಭಾಗದಲ್ಲಿ ದವಡೆ ಹಲ್ಲು ಬಂದಿತ್ತು. ಇದು ಅಶುಭ ಎಂದು ಹೇಳಿ ಬಾಲಕನನ್ನು ನಾಯಿ ಜೊತೆ ಮದುವೆ ಮಾಡಿಸಿದ್ದಾರೆ.
ಮೊದಲ ಬಾರಿಗೆ ಮೇಲ್ಭಾಗದಲ್ಲಿ ದವಡೆ ಬಂದರೆ ಅದು ಅಶುಭ ಹಾಗೂ ಬೇರೆ ಗ್ರಹಗಳ ನೆರಳು ಮಗು ಮೇಲೆ ಬೀಳುತ್ತದೆ. ಹಾಗಾಗಿ ಎರಡನೇ ಹಲ್ಲು ಬರುವ ಮೊದಲು ಮಗುವಿಗೆ ನಾಯಿಯ ಜೊತೆ ಮದುವೆ ಮಾಡಿಸಿದರೆ ಅಶುಭ ತಪ್ಪುತ್ತದೆ ಎನ್ನುವ ಭಾವನೆ ಈ ಗ್ರಾಮಸ್ಥರಲ್ಲಿದೆ.
ಈ ಹಿಂದೆ ಕೂಡ ಇದೇ ರೀತಿ ನಡೆದಿದ್ದು, 18 ವರ್ಷದ ಯುವತಿಯನ್ನು ನಾಯಿಯ ಜೊತೆ ಮದುವೆ ಮಾಡಿಸಿದ್ದರು. ಯಾಕೆ ಈ ರೀತಿ ಮದುವೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರು, ಈಕೆಯಿಂದ ಗ್ರಾಮದ ಜನರಿಗೆ ತೊಂದರೆ ಆಗಲಿದೆ ಹೀಗಾಗಿ ಈ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ನಾಯಿ ಜೊತೆ ಮದುವೆ ಮಾಡಿಸಲಾಗಿದೆ ಎಂದು ಉತ್ತರ ನೀಡಿದ್ದರು.