ಪುಣೆ: ಮಾನವ ಹಕ್ಕುಗಳ ಕಾರ್ಯಕರ್ತರಂತೆ ಪೋಸ್ ಕೊಟ್ಟ ಮೂವರು ಅಪರಿಚಿತ ವ್ಯಕ್ತಿಗಳು 21ರ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರ (Maharashtra Pune) ರಾಜ್ಯದ ಪುಣೆಯಲ್ಲಿ (Pune) ನಡೆದಿದೆ.
ಯುವತಿಯು ನಗರದ ಬೋಪದೇವ್ ಘಾಟ್ (Bopdev Ghat) ಪ್ರದೇಶಕ್ಕೆ ಸ್ನೇಹಿತನೊಂದಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ. ಬಂಧಿತನನ್ನು 36 ವರ್ಷದ ಕೊಂಡ್ವಾ ನಿವಾಸಿ ರಾಜೇ ಖಾನ್ ಕರೀಂ ಪಠಾಣ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದೆಹಲಿ ಡಾಕ್ಟರ್ ಹತ್ಯೆ ಕೇಸ್ – ಚಿಕಿತ್ಸೆಗೆ ಹೆಚ್ಚಿನ ಬಿಲ್ ಮಾಡಿದ್ದಕ್ಕೆ ಕೊಲೆ ಮಾಡ್ದೆ ಎಂದ ಅಪ್ರಾಪ್ತ!
ರಾತ್ರಿ 11 ಗಂಟೆ ವೇಳೆಗೆ ಸಂತ್ರಸ್ತ ಯುವತಿ ಆಕೆಯ ಸ್ನೇಹಿತನೊಂದಿಗೆ ಬೋಪ್‌ದೇವ್ ಘಾಟ್ ಪ್ರದೇಶಕ್ಕೆ ತೆರಳಿದ್ದಳು. ಈ ವೇಳೆ ಅಲ್ಲಿಗೆ ಬಂದ ಮೂವರು ಆರೋಪಿಗಳ ಪೈಕಿ ಪಠಾಣ್ ಎಂಬುವವನು ಮಾನವ ಹಕ್ಕುಗಳ ಕಾರ್ಯಕರ್ತನಂತೆ ಪೋಸ್ ಕೊಟ್ಟಿದ್ದಾನೆ. ಈ ಪ್ರದೇಶದಲ್ಲಿ ದಂಪತಿಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿ ಇಬ್ಬರ ಫೋಟೋಗಳನ್ನು ತೆಗೆದುಕೊಂಡಿದ್ದಾನೆ.
ನಂತರ ಆರೋಪಿ ಪಠಾಣ್ ಯುವತಿಯನ್ನು ಬೆದರಿಸಿ, ತನ್ನ ಕಾರಿಗೆ ಬಲವಂತವಾಗಿ ಹತ್ತಿಸಿದ್ದಾನೆ. ಅಲ್ಲಿದ್ದ ಯುವತಿಯ ಸ್ನೇಹಿತನನ್ನು ಥಳಿಸಿದ್ದಾನೆ. ಆಕೆಯನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಪಠಾಣ್ ಕಾರನ್ನು ನಿಲ್ಲಿಸಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ.
ಅತ್ಯಚಾರದ ಬಳಿಕ ಆರೋಪಿ ಹಾಗೂ ಆತನ ಸ್ನೇಹಿತರು ಯುವತಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಯುವತಿ ಅ.4 ರಂದು ಬೆಳಿಗ್ಗೆ ಕೊಂಡ್ವಾ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಾಥಮಿಕ ತನಿಖೆಯಿಂದ ಮಹಿಳೆಯ ದೇಹಕ್ಕೆ ಹಲವಾರು ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆ ಶಾಕ್!
ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆದಿದ್ದು, ಉಳಿದ ಶಂಕಿತರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಅಪರಾಧ ವಿಭಾಗ ಮತ್ತು ಪತ್ತೆ ವಿಭಾಗದಿಂದ (ಡಿಬಿ) 10 ತಂಡಗಳನ್ನು ನಿಯೋಜಿಸಲಾಗಿದೆ. ಸದ್ಯ ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.