ತುಮಕೂರು: ಮಂಗಳೂರಿನಲ್ಲಿ (Mangaluru) ಕುಕ್ಕರ್ ಬ್ಲಾಸ್ಟ್ (cooker blast) ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಟ್ವಿಸ್ಟ್‌ಗಳು ಸಿಗುತ್ತಲೇ ಇವೆ. ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟಿಸಿರುವ ವ್ಯಕ್ತಿ ಬಳಿ ಇದ್ದ ಪ್ರೇಮ್ ರಾಜ್ (Prem Raj) ಹೆಸರಿನ ಆಧಾರ್ ಕಾರ್ಡ್ (Aadhaar Card) ನಕಲಿ ಎನ್ನುವುದು ತಿಳಿದು ಬಂದ ಬೆನ್ನಲ್ಲೇ ಅಸಲಿ ಪ್ರೇಮ್ ರಾಜ್‌ನನ್ನು ಪೊಲೀಸರು ತುಮಕೂರಿನಲ್ಲಿ (Tumakuru) ಪತ್ತೆಹಚ್ಚಿದ್ದಾರೆ.
ಹುಬ್ಬಳ್ಳಿ (Hubballi) ಮೂಲದ ಪ್ರೇಮ ರಾಜ್ ಹುಟಗಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ನಾನು ತುಮಕೂರಿನಲ್ಲಿ ರೈಲ್ವೇ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸಮಾಡಿಕೊಂಡಿದ್ದು, ಸದ್ಯ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ.
ಕಳೆದ 2 ವರ್ಷಗಳಲ್ಲಿ 2 ಬಾರಿ ಆಧಾರ್ ಕಾರ್ಡ್ ಅನ್ನು ನಾನು ಕಳೆದುಕೊಂಡಿದ್ದೇನೆ. ಮೊದಲ ಸಲ ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಹೋಗುತ್ತಿದ್ದ ವೇಳೆ ಕಾರ್ಡ್ ಕಳೆದುಕೊಂಡಿದ್ದೆ. ಬಳಿಕ ಮತ್ತೊಂದು ಆಧಾರ್ ಕಾರ್ಡ್ ಪಡೆದಿದ್ದೆ. ಅದನ್ನು ಕಳೆದ 6 ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬರುತ್ತಿದ್ದ ವೇಳೆ ಕಳೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ.
ಶನಿವಾರ ರಾತ್ರಿಯೇ ನನಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕರೆ ಮಾಡಿ ತುಮಕೂರು ಎಸ್‌ಪಿಯನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಅದರಂತೆ ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರನ್ನು ಸಂಪರ್ಕಿಸಿದೆ. ನಿನ್ನೆ ನಮ್ಮ ಮನೆಗೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ – ಮೈಸೂರಿನಲ್ಲಿ ವಾಸ, ರೂಮಿನಲ್ಲಿ ಸ್ಫೋಟಕ ವಸ್ತುಗಳು ಪತ್ತೆ
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಪ್ರೇಮ್ ರಾಜ್, ನನ್ನ ಹೆಸರನ್ನು ಈ ರೀತಿಯಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನನಗೂ ಮಂಗಳೂರಿನಲ್ಲಿ ನಡೆದಿರುವ ಘಟನೆಗೂ ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳಿಗೆ ದೊರೆತಿರುವ ಆಧಾರ್ ಕಾರ್ಡ್‌ನಲ್ಲಿ ನನ್ನ ವಿಳಾಸ ಇದೆ. ಆದರೆ ಫೋಟೋ ನನ್ನದಲ್ಲ. ನನಗೂ ಈ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲ. ನನಗೆ ಯಾವುದೇ ಭಯವಿಲ್ಲ. ಪೊಲೀಸರು ಎಲ್ಲಿಗೆ ಬರಬೇಕು ಎಂದು ಹೇಳುತ್ತಾರೋ ಅಲ್ಲಿಗೆ ನಾನು ಬರುತ್ತೇನೆ ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರು ಮಂಗಳೂರು, ಕೊಯಮತ್ತೂರಿನಲ್ಲಿ ಓಡಾಡಿರುವ ಶಂಕೆ – ಇದೊಂದು ವ್ಯವಸ್ಥಿತ ಜಾಲ ಎಂದ ಸಿಎಂ